ಸಿನೆಮಾದಲ್ಲಿ 20 ಕಟ್: ಸೆನ್ಸಾರ್ ಮಂಡಳಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪಹ್ಲಾಜ್ ನಿಹಲಾನಿ

ಮುಂಬೈ,ನ.5: ತನ್ನ ಹಿಂದಿ ಸಿನೆಮಾ 'ರಂಗೀಲಾ ರಾಜಾ'ದಲ್ಲಿ 20 ಕಟ್‌ಗಳನ್ನು ಮಾಡುವಂತೆ ಸೂಚಿಸಿರುವ ಸೆನ್ಸಾರ್ ಮಂಡಳಿಯ ವಿರುದ್ದ ಚಿತ್ರದ ನಿರ್ದೇಶಕ, ಸಿನೆಮಾ ಪ್ರಮಾಣೀಕರಣ ಕೇಂದ್ರ ಮಂಡಳಿಯ (ಸಿಬಿಎಫ್‌ಸಿ) ಮಾಜಿ ಮುಖ್ಯಸ್ಥ ಪಹ್ಲಾಜ್ ನಿಹಲಾನಿ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಇದು ಕೇವಲ ವೈಯಕ್ತಿಕ ದ್ವೇಷ ಎಂದು ಆರೋಪಿಸಿರುವ ನಿಹಲಾನಿ, "ನಾನು ಸಿಬಿಎಫ್‌ಸಿಯ ಮುಖ್ಯಸ್ಥನಾಗಿದ್ದಾಗ ಹಲವರು ನನ್ನ ಮೇಲೆ ಕೋಪಗೊಂಡಿದ್ದರು ಮತ್ತು ಅಸಮಾಧಾನ ಹೊಂದಿದ್ದರು. ಈಗ ನನ್ನ ಸಿನೆಮಾ ಬಿಡುಗಡೆಗೆ ಸಿದ್ಧವಾಗಿರುವಾಗ ಅವರು ತಮ್ಮ ಹತಾಶೆಯನ್ನು ಈ ರೀತಿ ತೋರಿಸುತ್ತಿದ್ದಾರೆ. ಆದರೆ ನಾನು ಹೋರಾಡದೆ ಮಣಿಯುವುದಿಲ್ಲ" ಎಂದು ತಿಳಿಸಿದ್ದಾರೆ. ಸಿಬಿಎಫ್‌ಸಿ ಮುಖ್ಯಸ್ಥ ಪ್ರಸೂನ್ ಜೋಶಿಯನ್ನು ಪಕ್ಷಪಾತಿ ಎಂದು ಕರೆದಿರುವ ನಿಹಲಾನಿ, “ಜೋಶಿ ಆಮಿರ್ ಖಾನ್‌ರ ಗೆಳೆಯನಾಗಿದ್ದು, ನನ್ನ ಸಿನೆಮಾದ ಬದಲು ಆಮಿರ್ ಸಿನೆಮಾಗೆ ಪ್ರಾಮುಖ್ಯತೆ ನೀಡಿದ್ದಾರೆ. ನನ್ನ ಸಿನೆಮಾಗೆ ಸೂಚಿಸಲಾಗಿರುವ ಕಟ್‌ಗಳು ಸಿಬಿಎಫ್‌ಸಿಯ ಮಾರ್ಗದರ್ಶನಗಳನ್ನು ಉಲ್ಲಂಘಿಸುತ್ತದೆ” ಎಂದು ಆರೋಪಿಸಿದ್ದಾರೆ.
“ಆಮಿರ್ ಖಾನ್‌ರ ಥಗ್ಸ್ ಆಫ್ ಹಿಂದೊಸ್ತಾನ್‌ಗೆ ಯಾವುದೇ ಕಟ್ ಸೂಚಿಸದೆ ಪ್ರಮಾಣ ಪತ್ರ ನೀಡಿದ್ದಾರೆ. ಆದರೆ ನನ್ನ ಸಿನೆಮಾ ‘ರಂಗೀಲಾ ರಾಜಾ’ಗೆ ಮಾತ್ರ 20 ಕಟ್‌ಗಳನ್ನು ಸೂಚಿಸಿದ್ದಾರೆ. ನಾನು ಸಿನೆಮಾ ಬಿಡುಗಡೆಯ 60 ದಿನಗಳ ಮೊದಲೇ ಸೆನ್ಸಾರ್ ಗೆ ಕಳುಹಿಸಿದ್ದೆ. ಆದರೂ ಈ ರೀತಿ ಮಾಡಿದ್ದಾರೆ. ಆದರೆ ನಾನು ಇದನ್ನು ಒಪ್ಪುವುದಿಲ್ಲ” ಎಂದು ನಿಹಲಾನಿ ತಿಳಿಸಿದ್ದಾರೆ.





