ಓಶಿಯನ್ ಪರ್ಲ್ ಕುರಿತ ವಾಟ್ಸ್ಆ್ಯಪ್ ಸಂದೇಶ ಹಸಿ ಸುಳ್ಳು: ಅಧ್ಯಕ್ಷ ಜಯರಾಮ್ ಬನಾನ್
“ನಮ್ಮ ಹೊಟೇಲ್ ನಲ್ಲಿ ಕೇವಲ ಹಲಾಲ್ ಮಾಂಸಾಹಾರ”

ಮಂಗಳೂರು, ನ. 5: ನಗರದ ಓಶಿಯನ್ ಪರ್ಲ್ ಹೊಟೇಲ್ ನಲ್ಲಿ ಹಂದಿ ಮಾಂಸದ ಖಾದ್ಯಗಳನ್ನು ತಯಾರಿಸಲಾಗುತ್ತಿದೆ ಎಂಬರ್ಥದ ಸಂದೇಶವೊಂದು ಸೋಮವಾರ ಸಂಜೆಯಿಂದ ವಾಟ್ಸ್ಆ್ಯಪ್ ನಲ್ಲಿ ಹರಡುತ್ತಿದ್ದು, ಇದು ಹಸಿ ಸುಳ್ಳು ಹಾಗು ದುರುದ್ದೇಶದಿಂದ ಹರಡಲಾಗುತ್ತಿರುವ ಕಪೋಲಕಲ್ಪಿತ ಸಂದೇಶ ಎಂದು ಓಶಿಯನ್ ಪರ್ಲ್ ನ ಅಧ್ಯಕ್ಷ ಜಯರಾಮ್ ಬನಾನ್ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.
ಈ ಸುಳ್ಳು ಸುದ್ದಿ ಹರಡುತ್ತಿರುವವರು ಮಂಗಳೂರಿನ ಸರ್ವ ಧರ್ಮಗಳ ಜನರ ಅಪಾರ ಮನ್ನಣೆಗೆ ಪಾತ್ರವಾಗಿರುವ ಓಶಿಯನ್ ಪರ್ಲ್ ಕುರಿತು ಅಪನಂಬಿಕೆ ಹರಡಿ ಅದರ ವರ್ಚಸನ್ನು ಕುಂದಿಸುವ ಹತಾಶ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ದುಷ್ಕೃತ್ಯ ಎಸಗುತ್ತಿರುವವರ ವಿರುದ್ಧ ಓಶಿಯನ್ ಪರ್ಲ್ ಸೂಕ್ತ ಕಾನೂನು ಕ್ರಮಕೈಗೊಳ್ಳಲಿದೆ ಎಂದು ಜಯರಾಮ್ ಬನಾನ್ ಪ್ರಕಟನೆಯಲ್ಲಿ ಹೇಳಿದ್ದಾರೆ.

ಈ ಸುಳ್ಳು ಸುದ್ದಿಯಲ್ಲಿ ಹೇಳಿರುವಂತೆ ಓಶಿಯನ್ ಪರ್ಲ್ ಬ್ರಿಟೀಷ್ ಏರ್ ವೇಸ್ ಮತ್ತು ಜೆಟ್ ಏರ್ ವೇಸ್ ಗೆ ಯಾವುದೇ ಆಹಾರ ಪದಾರ್ಥ ಗಳನ್ನು ಸರಬರಾಜು ಮಾಡುತ್ತಿಲ್ಲ ಹಾಗು ಈ ಎರಡೂ ವಿಮಾನಯಾನ ಸಂಸ್ಥೆಗಳೊಂದಿಗೆ ಓಶಿಯನ್ ಪರ್ಲ್ ಅಂತಹ ಯಾವುದೇ ಒಪ್ಪಂದಗಳನ್ನು ಹೊಂದಿಲ್ಲ. ಓಶಿಯನ್ ಪರ್ಲ್ ಕೇವಲ ಏರ್ ಇಂಡಿಯಾ ಸಂಸ್ಥೆಗೆ ಉಪಹಾರಗಳನ್ನು ಒದಗಿಸುತ್ತಿದ್ದು ಅದು ಕೇವಲ ಶುದ್ಧ ಸಸ್ಯಹಾರಿ ಉಪಹಾರಗಳು. ಓಶಿಯನ್ ಪರ್ಲ್ ನಲ್ಲಿ ಹಂದಿ ಮತ್ತು ಬೀಫ್ ಉತ್ಪನ್ನಗಳನ್ನು ತಯಾರಿಸುವುದೇ ಇಲ್ಲ.
ಓಶಿಯನ್ ಪರ್ಲ್ ನಲ್ಲಿ ಕೇವಲ ಹಲಾಲ್ ವಿಧಾನಗಳಿಂದ ಪಡೆದ ಮಟನ್ ಮತ್ತು ಚಿಕನ್ ಖಾದ್ಯಗಳನ್ನು ಗ್ರಾಹಕರಿಗೆ ನೀಡಲಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಅತ್ಯುತ್ತಮ ಗುಣಮಟ್ಟದ ಆಹಾರ ಹಾಗು ಅತ್ಯುತ್ತಮ ಸೇವೆಯ ಮೂಲಕ ಓಶಿಯನ್ ಪರ್ಲ್ ದ.ಕ. ಮತ್ತು ಉಡುಪಿ ಜಿಲ್ಲೆಗಳ ಎಲ್ಲ ಜನರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಮುಂದೆಯೂ ಇದೇ ರೀತಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸಲು ಓಶಿಯನ್ ಪರ್ಲ್ ಬದ್ಧವಾಗಿದೆ. ಆದ್ದರಿಂದ ಇಂತಹ ಸುಳ್ಳು ಸುದ್ದಿಗಳನ್ನು ಜನರು ಸಂಪೂರ್ಣ ನಿರ್ಲಕ್ಷಿಸಬೇಕು ಎಂದು ಜಯರಾಮ್ ಬನಾನ್ ವಿನಂತಿಸಿದ್ದಾರೆ.








