ಇರಾನ್‌ಗೆ ರಾಯಭಾರಿಯಾಗಿ ಗದ್ದಂ ಧರ್ಮೇಂದ್ರ ನೇಮಕ

ಹೊಸದಿಲ್ಲಿ, ನ.5: ಹಿರಿಯ ರಾಜತಂತ್ರಜ್ಞ ಗದ್ದಂ ಧರ್ಮೇಂದ್ರ ಅವರನ್ನು ಇರಾನ್‌ಗೆ ಭಾರತದ ರಾಯಭಾರಿಯಾಗಿ ನೇಮಿಸಲಾಗಿದೆ ಎಂದು ವಿದೇಶ ವ್ಯವಹಾರ ಸಚಿವಾಲಯ ಸೋಮವಾರ ಘೋಷಿಸಿದೆ. 1990ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿರುವ ಧರ್ಮೇಂದ್ರ ಈಗ ವಿದೇಶ ವ್ಯವಹಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ತಿಂಗಳು ಮ್ಯಾನ್ಮಾರ್‌ಗೆ ರಾಯಭಾರಿಯಾಗಿ ನಿಯುಕ್ತಿಗೊಂಡಿದ್ದ ಸೌರಭ್ ಕುಮಾರ್ ಅವರು ತೆರವುಗೊಳಿಸಿದ್ದ ಸ್ಥಾನಕ್ಕೆ ಧರ್ಮೇಂದ್ರ ನೇಮಕಗೊಂಡಿದ್ದಾರೆ.
ಇರಾನ್‌ನಿಂದ ತೈಲ ಆಮದಿನ ಮೇಲೆ ಸೋಮವಾರ ಅಮೆರಿಕ ಅತ್ಯಂತ ಕಠಿಣ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಧರ್ಮೇಂದ್ರರನ್ನು ಇರಾನ್‌ಗೆ ರಾಯಭಾರಿಯಾಗಿ ನೇಮಿಸಿರುವುದು ಗಮನಾರ್ಹವಾಗಿದೆ. ಭಾರತ, ಚೀನಾ ಸೇರಿದಂತೆ ಎಂಟು ರಾಷ್ಟ್ರಗಳಿಗೆ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ. ಇದೇ ವೇಳೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ(ಡಿಆರ್ ಕಾಂಗೊ)ಗೆ ಭಾರತದ ರಾಯಭಾರಿಯಾಗಿದ್ದ ನೀನಾ ಶೆರಿಂಗ್‌ರನ್ನು ಏಕಕಾಲದಲ್ಲಿ ರಿಪಬ್ಲಿಕ್ ಆಫ್ ಕಾಂಗೊ( ಕಾಂಗೊ)ಗೂ ರಾಯಭಾರಿಯನ್ನಾಗಿ ಸರಕಾರ ಮಾನ್ಯತೆ ನೀಡಿದ್ದು ಅವರು ಕಿನ್ಶಾಸದಲ್ಲಿ ನಿವಾಸವನ್ನು ಹೊಂದಿರುತ್ತಾರೆ ಎಂದು ತಿಳಿಸಿದೆ.





