ಕರೆನ್ ಕಚನೊವ್ ಚಾಂಪಿಯನ್
ಜೊಕೊವಿಕ್‌ಗೆ ಶಾಕ್ ನೀಡಿದ ರಶ್ಯದ ಯುವ ತಾರೆ

ಪ್ಯಾರಿಸ್ ಮಾಸ್ಟರ್ಸ್
ಪ್ಯಾರಿಸ್, ನ.5: ರಶ್ಯದ 22ರ ಹರೆಯದ ಯುವ ಆಟಗಾರ ಕರೆನ್ ಕಚನೊವ್‌ಅವರು ಪ್ಯಾರಿಸ್ ಮಾಸ್ಟರ್ಸ್ ಪುರುಷರ ಟೆನಿಸ್ ಫೈನಲ್‌ನಲ್ಲಿ ಸರ್ಬಿಯಾದ ನಂ.1ತಾರೆ ನೊವಾಕ್ ಜೊಕೊವಿಕ್‌ಗೆ ಸೋಲುಣಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿದ್ದಾರೆ.
ರವಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಕರೆನ್ ಅವರು ಜೊಕೊವಿಕ್ ವಿರುದ್ಧ 7-5, 6-4 ನೇರ ಸೆಟ್‌ಗಳಿಂದ ಜಯ ಗಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಐದನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದ್ದ ಜೊಕೊವಿಕ್ ಅವರು ಯುವ ಆಟಗಾರ ಕಚನೊವ್ ವಿರುದ್ಧ ಸೋತು ಆಘಾತ ಅನುಭವಿಸಿದರು. 1 ಗಂಟೆ ಮತ್ತು 37 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಜೊಕೊವಿಕ್ ಎದುರಾಳಿ ವಿರುದ್ಧ ಸೋಲು ಅನುಭವಿಸಿದರು.
ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಜೊಕೊವಿಕ್ ಅವರು ರೋಜರ್ ಫೆಡರರ್‌ಗೆಸೋಲುಣಿಸಿದ್ದರು. ಫೆಡರರ್‌ಗೆ ನೂರನೇ ಎಟಿಪಿ ಪ್ರಶಸ್ತಿ ಗೆಲ್ಲುವ ಪ್ರಯತ್ನಕ್ಕೆ ತಡೆಯೊಡ್ಡಿದ್ದರು. ಇದೇ ವೇಳೆ ಕಚನೊವ್ ಅವರು ಆಸ್ಟ್ರೀಯದ ಡೊಮಿನಿಕ್ ಥೀಮ್ ವಿರುದ್ಧ ಸೆಮಿಫೈನಲ್‌ನಲ್ಲಿ ಜಯ ಗಳಿಸಿ ಫೈನಲ್ ತಲುಪಿದ್ದರು.





