ರಾಣಿ ಅಬ್ಬಕ್ಕಳನ್ನು ಇತಿಹಾಸಕಾರರು ಮರೆತಿರುವುದು ವಿಷಾದನೀಯ: ಟಿ.ಎಸ್. ನಾಗಾಭರಣ

ಹೊಸದಿಲ್ಲಿ, ನ.6: ಕರ್ನಾಟಕ ಕರಾವಳಿಯಲ್ಲಿ ರಾಣಿಯಾಗಿ ಮೆರದಿದ್ದ ಅಬ್ಬಕ್ಕಳನ್ನು ಇತಿಹಾಸಕಾರರು ಮರೆತಿರುವುದು ವಿಷಾದನೀಯ ಎಂದು ಚಲನಚಿತ್ರ ನಿರ್ದೇಕ ಟಿ.ಎಸ್. ನಾಗಾಭರಣ ಹೇಳಿದ್ದಾರೆ.
ಹೊಸದಿಲ್ಲಿ ಮತ್ತು ಆಸುಪಾಸಿನ ಕನ್ನಡ ಹಾಗೂ ಕನ್ನಡೇತರರ ಮಕ್ಕಳಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ.ಜಿಲ್ಲಾಡಳಿತ ಮತ್ತು ದೆಹಲಿ ಕನ್ನಡ ಶಾಲೆ ಜೊತೆಗೆ ಜಂಟಿಯಾಗಿ ದೆಹಲಿ ಕರ್ನಾಟಕ ಸಂಘ ಆಯೋಜಿಸಿದ್ದ ರಾಣಿ ಅಬ್ಬಕ್ಕ ಚಿತ್ರ ಕಲಾ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸ್ವಾತಂತ್ರ್ಯ ಅಂದರೆ ಸ್ವೇಚ್ಛೆಯಲ್ಲ ಎಂಬುದನ್ನು ಅರಿತುಕೊಂಡು ಸ್ತ್ರೀಯೊಬ್ಬಳು ಕತ್ತಿ ಹಿಡಿದು ತನ್ನನ್ನು ತಾನು, ತನ್ನ ಪರಿವಾರವನ್ನು, ತನ್ನ ಭಾಷೆಯನ್ನು, ತನ್ನ ರಾಜ್ಯವನ್ನು ಉಳಿಸಿಕೊಳ್ಳುತ್ತಾಳೆ ಎಂಬುದನ್ನು ಸಾಧಿಸಿ ತೋರಿಸಿದ ಕೆಲವೇ ಕೆಲವು ಮಹಾರಾಣಿಗಳಲ್ಲಿ ರಾಣಿ ಅಬ್ಬಕ್ಕ ಒಬ್ಬರು. ರಾಣಿ ಅಬ್ಬಕ್ಕ ರಾಜ್ಯವನ್ನು ನಿಭಾಯಿಸಿದ್ದು, ಸ್ವಾತಂತ್ರ್ಯದ ಆಶಯವನ್ನು ಬಿತ್ತರಿಸಿದ ರೀತಿ ಅತಿ ಮುಖ್ಯ ಎಂದು ನಾಗಾಭರಣ ಅಭಿಪ್ರಾಯಪಟ್ಟರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮಾತನಾಡಿದರು.
ಕಾರ್ಯಕ್ರಮದ ಸಂಚಾಲಕರಾದ ದೆಹಲಿ ಕನ್ನಡ ಶಾಲೆಯ ಶಿಕ್ಷಕಿ ಜ್ಯೋತಿ ಪೋದ್ದಾರ್, ಚಿತ್ರಕಲಾವಿದ ಚೆನ್ನು ಎಸ್.ಮಠದ, ದೆಹಲಿ ಕನ್ನಡ ಶಾಲೆಯ ಅಧ್ಯಕ್ಷ ಸರವೂ ಕೃಷ್ಣ ಭಟ್, ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಸಿ. ಎಂ. ನಾಗರಾಜ್, ಖಜಾಂಚಿ ಕೆ.ಎಸ್. ಜಿ. ಶೆಟ್ಟಿ ಭಾಗವಹಿಸಿದ್ದರು.
ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಮಂಜುನಾಥ್ ಕಾಮತ್, ಅರುಣ್ ಕುಮಾರ್ ಎಚ್.ಜಿ. ತೀರ್ಪುಗಾರರಾಗಿ ಸಹಕರಿಸಿದ್ದರು.







