ಅವನಿ ಹತ್ಯೆ: ಮಹಾ ಸಚಿವರ ವಜಾಗೆ ಸಚಿವೆ ಮೇನಕಾ ಗಾಂಧಿ ಪಟ್ಟು

ಪುಣೆ, ನ. 6: ಪಂಧರ್‌ಕಾವಡ ಅರಣ್ಯದಲ್ಲಿ ಹೆಣ್ಣು ಹುಲಿ ಅವನಿಗೆ ಮತ್ತು ಭರಿಸುವ ಚುಚ್ಚುಮದ್ದು ನೀಡುವ ಪ್ರಯತ್ನವನ್ನೇ ಮಾಡದೇ, ನೇರವಾಗಿ ಗುಂಡಿಟ್ಟು ಕೊಲ್ಲಲು ಆದೇಶ ಮಾಡಿದ ಮಹಾರಾಷ್ಟ್ರ ಅರಣ್ಯ ಸಚಿವ ಸುಧೀರ್ ಮುಂಗಂಟಿವರ್ ಅವರನ್ನು ತಕ್ಷಣ ಸಂಪುಟದಿಂದ ವಜಾ ಮಾಡುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮೇನಕಾ ಗಾಂಧಿ ಆಗ್ರಹಿಸಿದ್ದಾರೆ.
"ಅರಣ್ಯ ಇಲಾಖೆ ಅಧಿಕಾರಿಗಳು ಅವನಿಗೆ ಮತ್ತು ಭರಿಸುವ ಚುಚ್ಚುಮದ್ದು ನೀಡಿ, ಹಿಡಿದು ಪಳಗಿಸಲು ಸಿದ್ಧರಿದ್ದರೂ, ಸಚಿವ ಮುಂಗಂಟಿವರ್ ಖಾಸಗಿ ಆದೇಶದಂತೆ ಹುಲಿಗೆ ನೇರವಾಗಿ ಗುಂಡು ಹೊಡೆಯಲಾಗಿದೆ. ಬಿಜೆಪಿ ಅಪರಾಧಿಯನ್ನು ಅಥವಾ ಅಪರಾಧಿಗಳ ಜತೆ ನಂಟು ಹೊಂದಿರುವವರನ್ನು ಪಕ್ಷದಲ್ಲಿ ಇಟ್ಟುಕೊಳ್ಳುವ ಸ್ಥಿತಿಯಲ್ಲಿಲ್ಲ" ಎಂದು ಮೇನಕಾ ಸ್ಪಷ್ಟಪಡಿಸಿದರು.
ಕಾನೂನಾತ್ಮಕವಾಗಿ, ರಾಜಕೀಯವಾಗಿ ಮುಂಗಂಟಿವರ್ ಪಕ್ಷಕ್ಕೆ ಹೊರೆ. ಆದ್ದರಿಂದ ತಕ್ಷಣ ಅವರನ್ನು ವಜಾ ಮಾಡುವಂತೆ ಮುಖ್ಯಮಂತ್ರಿಯವರನ್ನು ಕೋರಿದ್ದಾಗಿ ಸಚಿವೆ ವಿವರಿಸಿದರು.
ಅವನಿ ಹತ್ಯೆ ಸಂಬಂಧ ನ್ಯಾಯಾಲಯದಲ್ಲಿ ದಾವೆ ಹೂಡಲೂ ಸಿದ್ಧತೆ ನಡೆಸಿರುವುದಾಗಿ ಅವರು ಪ್ರಕಟಿಸಿದ್ದಾರೆ. ಕೆಲವೇ ದಿನಗಳಲ್ಲಿ ಮಹಾರಾಷ್ಟ್ರದ ಅರಣ್ಯ ಇಲಾಖೆ, ಮುಂಗಟಿವರ್ ಮತ್ತಿತರರ ಕ್ರಮದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ವನ್ಯಪ್ರೇಮಿ ಜೆರಿಲ್ ಬನಾಯಿತ್ ಪ್ರಕಟಿಸಿದ್ದಾರೆ.
ಅವನಿಯನ್ನು ಕಂಡಲ್ಲಿ ಗುಂಡಿಕ್ಕಲು ಸೆಪ್ಟೆಂಬರ್‌ನಲ್ಲಿ ನೀಡಿದ ಆದೇಶದ ವಿರುದ್ಧ ಬನಾಯಿತ್ ಈ ಮುನ್ನ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅವನಿ ಹತ್ಯೆ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ನವೆಂಬರ್ 11ರಂದು ದೇಶವ್ಯಾಪಿ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪುಣೆ, ಮುಂಬೈ, ನಾಗ್ಪುರ, ದೆಹಲಿ, ಕೊಲ್ಕತ್ತಾ, ಬೆಂಗಳೂರು, ಚೆನ್ನೈ, ಶಿಲ್ಲಾಂಗ್, ವಿಜೋರಾಂನಂಥ ನಗರಗಳಲ್ಲಿ ಪ್ರತಿಭಟನೆ ನಡೆಯಲಿದ್ದು, ಇಂಗ್ಲೆಂಡ್, ಅಮೆರಿಕ, ಕೆನಡ ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.







