ಅಶ್ರಫ್ ಸಾಲೆತ್ತೂರು ಪ್ರಕರಣ: ಬಂದರು ಠಾಣೆಯ ಎಎಸ್ಸೈ ಅಮಾನತು

ಮಂಗಳೂರು, ನ. 6: ಫೇಸ್‌ಬುಕ್‌ನಲ್ಲಿ ನಿಂದನಾತ್ಮಕ ಬರಹ ಪ್ರಕಟಿಸಿದ ಆರೋಪ ಹೊರಿಸಿ ಅಶ್ರಫ್ ಸಾಲೆತ್ತೂರು ಎಂಬವರ ಮೇಲೆ ಪೊಲೀಸರು ಎಸಗಿದ್ದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದರ್ ಠಾಣೆಯ ಎಎಸ್ಸೈ ಚಂದ್ರಶೇಖರ್‌ರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅಮಾನತುಗೊಳಿಸಿದ್ದಾರೆ.
‘ಋತುಮತಿಯಾದ ಮಹಿಳೆಯನ್ನು ಶಬರಿಮಲೆ ಪ್ರವೇಶಿಸಲು ಕೋರ್ಟ್ ಅವಕಾಶ ನೀಡಿದ್ದೇ ಕೇರಳದಲ್ಲಿ ನೆರೆ ಬರಲು ಕಾರಣ’ ಎಂದು ಕೆಲವು ಮಂದಿ ವ್ಯಕ್ತಪಡಿಸಿದ ಅನಿಸಿಕೆಗೆ ಪ್ರತಿಯಾಗಿ ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿರುವ ಅಶ್ರಫ್ ಎಂ. ಸಾಲೆತ್ತೂರು ‘ಹಾಗಾದರೆ ಪರಶುರಾಮನ ಸೃಷ್ಟಿ ತುಳುನಾಡಲ್ಲಿ ನೆರೆ ಬರಲು ಕಾರಣ ಏನು?’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಕೆಲವು ಪರ-ವಿರೋಧವೂ ವ್ಯಕ್ತವಾಗಿತ್ತು.
ಇದನ್ನೇ ಆಧಾರವಾಗಿಟ್ಟುಕೊಂಡ ಬಂದರ್ ಠಾಣೆಯ ಪೊಲೀಸರು ಅಶ್ರಫ್‌ರ ಮೇಲೆ ಸ್ವಯಂ ಪ್ರೇರಿತವಾಗಿ ಸೆ.153, 505(2)ರಂತೆ ಪ್ರಕರಣ ದಾಖಲಿಸಿಕೊಂಡು ಆ. 22ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅದರಂತೆ ನ್ಯಾಯಾಲಯವು ಅಶ್ರಫ್‌ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಒಂದು ವಾರ ಜೈಲಿನಲ್ಲಿ ಕಳೆದ ಅಶ್ರಫ್ ಜಾಮೀನು ಪಡೆದುಕೊಂಡ ಬಳಿಕವೂ ತನಗಾದ ಅನ್ಯಾಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸತೊಡಗಿದ್ದರು. ಇದರಿಂದ ಅಧೀರರಾದ ಪೊಲೀಸರು ಸೆ.4ರಂದು ಅಶ್ರಫ್‌ಗೆ ನೋಟಿಸ್ ಜಾರಿಗೊಳಿಸಿ ಜಾಮೀನಿನ ಅವಧಿಯಲ್ಲಿ ನೀವು ಮತ್ತೆ ಇದೇ ವಿಚಾರದಲ್ಲಿ ಫೇಸ್‌ಬುಕ್‌ನಲ್ಲಿ ಟೀಕೆ ಮಾಡಿರುವಿರಿ. ಹಾಗಾಗಿ ಮುಂದಿನ ತನಿಖೆಗಾಗಿ ನೋಟಿಸ್ ಸಿಕ್ಕಿದ ತಕ್ಷಣ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಇಲ್ಲದಿದ್ದರೆ ನಿಮ್ಮ ಜಾಮೀನು ರದ್ಧತಿಗೆ ನ್ಯಾಯಾಲಯಕ್ಕೆ ಕೋರಿಕೆ ಪತ್ರ ಸಲ್ಲಿಸಲಾಗುವುದು ಎಂದು ಸೂಚಿಸಿದ್ದರು.
ಫೇಸ್‌ಬುಕ್‌ನಲ್ಲಿ ಪ್ರಕಟಗೊಂಡ ಬರಹಕ್ಕೆ ಸಂಬಂಧಿಸಿದಂತೆ ಬಂದರು (ಉತ್ತರ) ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಅಶ್ರಫ್‌ನನ್ನು ಜೈಲಿಗೆ ತಳ್ಳಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಡಿವೈಎಫ್‌ಐ ಸಂಘಟನೆಯು ಪೊಲೀಸ್ ಆಯುಕ್ತರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಆಂತರಿಕ ತನಿಖೆ ನಡೆಸಿದ ಪೊಲೀಸರು ಎಎಸ್ಸೈಯನ್ನು ಅಮಾನತುಗೊಳಿಸಿದ್ದಾರೆ.
ಈ ಬಗ್ಗೆ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಪ್ರತಿಕ್ರಿಯೆ ನೀಡಿ ‘ಇದು ಇಲಿಯನ್ನು ಹಿಡಿದು ಹುಲಿ ಎಂದು ತೋರಿಸಿದಂತಿದೆ. ಪ್ರಕರಣಕ್ಕೆ ಎಳ್ಳು ನೀರು ಬಿಡುವ ಪ್ರಯತ್ನವನ್ನು ಪೊಲೀಸ್ ಇಲಾಖೆ ಮಾಡಿದೆ. ಅಶ್ರಫ್ ಸಾಲೆತ್ತೂರಿಗೆ ವಕೀಲರನ್ನು ನೇಮಿಸಲು ಅವಕಾಶ ಮಾಡಿಕೊಟ್ಟ ತಪ್ಪಿಗೆ ಎಎಸ್ಸೈ ಚಂದ್ರಶೇಖರ್ ಮೇಲೆ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಾಂಗ ನಿಂದನೆಯನ್ನು ಉಲ್ಲೇಖಿಸಿ ಅಶ್ರಫ್ ಸಾಲೆತ್ತೂರು ಹಾಕಿದ್ದ ಫೇಸ್‌ಬುಕ್ ಪೋಸ್ಟ್ ನಲ್ಲಿ ಯಾವುದೇ ಧರ್ಮ ಮತ್ತು ವ್ಯಕ್ತಿ ನಿಂದನೆಯ ಉದ್ದೇಶವಿಲ್ಲದಿದ್ದರೂ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಒತ್ತಡ ಹಾಕಿದ್ದ ಡಿಸಿಪಿ ಕ್ರೈಂ ಹಾಗೂ ಅಶ್ರಫ್ ಸಾಲೆತ್ತೂರ್‌ರನ್ನು ಬಂಧಿಸಿ ಬೆದರಿಸಿದ ಸಿಸಿಬಿ ಪೊಲೀಸರು ಲಾಕಪ್ಪಲ್ಲಿ ಕೂಡಿ ಹಾಕಿ ಹಿಂಸಿಸಿದ ಪೊಲೀಸರ ಮೇಲೆ ಕ್ರಮಕೈಗೊಳ್ಳದೆ ಎಎಸ್ಸೈ ಮೇಲೆ ಕ್ರಮ ಜರುಗಿಸಿರುವುದು ಖಂಡನೀಯ. ಪೊಲೀಸ್ ಅಧಿಕಾರಿಗಳ ಈ ತನಿಖಾ ಕ್ರಮವು ಇಲಾಖೆಯ ಮೇಲಿನ ವಿಶ್ವಾಸವನ್ನು ಕುಗ್ಗಿಸಿದೆ ಎಂದಿದ್ದಾರೆ.







