ಬಿಜೆಪಿಯ ಸೋಲಿನ ಸರಮಾಲೆ ಪ್ರಾರಂಭ: ಸಿದ್ದರಾಮಯ್ಯ
"ಈ ಗೆಲುವು ದೀಪಾವಳಿಗೆ ನೀಡಿದ ಉಡುಗೊರೆ"

ಬೆಂಗಳೂರು, ನ.6: ಉಪಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳು ಗೆಲುವು ಸಾಧಿಸಿರುವ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರತೀಯ ಜನತಾ ಪಕ್ಷದ ಸೋಲಿನ ಸರಮಾಲೆ ಇಂದಿನಿಂದ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.
ಮಂಗಳವಾರ ಸರಣಿ ಟ್ವಿಟ್ ಮಾಡಿರುವ ಸಿದ್ದರಾಮಯ್ಯ, ಸೋಲಿನ ಸರಮಾಲೆ ಇಂದಿನಿಂದ ಪ್ರಾರಂಭವಾಗಿದ್ದು, ಇದು 2019ರ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇದಕ್ಕೂ ಮೊದಲು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ವಿ.ಎಸ್.ಉಗ್ರಪ್ಪ ಗೆಲ್ಲುವ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದೆ. ಉಗ್ರಪ್ಪ ಅವರು 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಅನೇಕ ಬಾರಿ ಹೇಳಿದ್ದೆ. ಪ್ರತಿ ಕ್ಷೇತ್ರಕ್ಕೆ ಹೋದಾಗಲೂ ನನಗೆ ಜನರ ಭಾವನೆ ಅರ್ಥವಾಗುತ್ತಿತ್ತು. ಹಾಗೆಯೇ ಆಗಿದೆ ಎಂದು ಎಂದು ತಿಳಿಸಿದರು.
ಮೈತ್ರಿ ಸರಕಾರ ಬಿದ್ದೇ ಹೋಗುತ್ತದೆ ಎಂದು ಅನೇಕರು ಊಹಿಸಿಕೊಂಡಿದ್ದರು. ಆದರೆ ಅದು ಸುಳ್ಳಾಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಪುಟಿದೇಳಲಿದೆ. ಲೋಕಸಭಾ ಚುನಾವಣೆಯಲ್ಲಿ ನಾವು ಮೈತ್ರಿ ಮಾಡಿಕೊಂಡೇ ಸ್ಪರ್ಧಿಸುತ್ತೇವೆ. ಈ ಗೆಲುವು ಜನತೆ ದೀಪಾವಳಿಗೆ ನೀಡಿದ ಉಡುಗೊರೆ ಎಂದರು.
ನಾನು ಬಿಜೆಪಿಯವರ ಮಾತಿಗೆ ಕವಡೆ ಕಾಸಿನ ಬೆಲೆ ನೀಡುವುದಿಲ್ಲ. ಅವರಿಗೆ ಸುಳ್ಳು ಹೇಳುವುದು ಬಿಟ್ಟು ಬೇರೇನು ಗೊತ್ತಿಲ್ಲ. ಅವರು ಸುಳ್ಳನ್ನೇ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.







