ನೋಟು ರದ್ದತಿಯ ವೆಚ್ಚ: ಗುಟ್ಟು ಬಿಡದ ಆರ್ಬಿಐ
ಇಂದೋರ್, ನ. 7: ನೋಟು ಅಮಾನ್ಯ ಘೋಷಣೆ ಬಳಿಕ ಬ್ಯಾಂಕುಗಳಿಗೆ ಮರಳಿದ 15,31,073 ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ನಾಶಪಡಿಸಲು ತಗುಲಿದ ವೆಚ್ಚವನ್ನು ಬಹಿರಂಗಪಡಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರಾಕರಿಸಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಈ ಸಂಬಂಧ ಕೇಳಿದ ಪ್ರಶ್ನೆಗೆ ಆರ್ಬಿಐ ಉತ್ತರ ನೀಡಿಲ್ಲ. ಆದರೆ ಇವುಗಳನ್ನು ನಾಶಪಡಿಸುವ ಪ್ರಕ್ರಿಯೆ 2018ರ ಮಾರ್ಚ್ನಲ್ಲಿ ಪೂರ್ಣಗೊಂಡಿದೆ ಎಂದು ಸ್ಪಷ್ಟಪಡಿಸಿದೆ.
ಮಧ್ಯಪ್ರದೇಶದ ನೀಮಚ್ ಪಟ್ಟಣದ ಚಂದ್ರಶೇಖರ ಗೌಡ್ ಎಂಬುವವರು ಕೇಳಿದ್ದ ಪ್ರಶ್ನೆಗೆ ಅಕ್ಟೋಬರ್ 29ರಂದು ಆರ್ಬಿಐ ಉತ್ತರ ನೀಡಿದ್ದು, 10720 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿಲ್ಲ ಎಂದು ಆರ್ಬಿಐನ ನೋಟು ನಿರ್ವಹಣಾ ವಿಭಾಗ ಈ ಉತ್ತರ ನೀಡಿದೆ.
ನೋಟು ದೃಢೀಕರಣ ಮತ್ತು ಸಂಸ್ಕರಣಾ ವ್ಯವಸ್ಥೆಯ ಯಂತ್ರಗಳ ಮೂಲಕ ಹಳೆ ನೋಟುಗಳನ್ನು ನಾಶಪಡಿಸಲಾಗಿದೆ ಎಂದು ಹೇಳಿದ್ದು, ಇದಕ್ಕೆ ತಗುಲಿದ ವೆಚ್ಚದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 7 (9) ಉಲ್ಲೇಖಿಸಿ ಮಾಹಿತಿ ನಿರಾಕರಿಸಲಾಗಿದ್ದು, ಈ ಮಾಹಿತಿ ಲಭ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಎಷ್ಟು 500 ರೂಪಾಯಿ ನೋಟುಗಳನ್ನು ಹಾಗೂ ಎಷ್ಟು 1000 ರೂಪಾಯಿ ನೋಟುಗಳನ್ನು ನಾಶಪಡಿಸಲಾಗಿದೆ ಎಂಬ ಪ್ರಶ್ನೆಗೂ ಗೌಡ್ ಅವರಿಗೆ ಉತ್ತರ ಸಿಕ್ಕಿಲ್ಲ.