ಕೇಂದ್ರ ಸರಕಾರದಿಂದ ಆರ್‌ಬಿಐ ದುರ್ಬಲ: ಡಿಸಿಸಿ ವಕ್ತಾರ ಎ.ಸಿ.ವಿನಯರಾಜ್ ಆರೋಪ

ಮಂಗಳೂರು, ನ.7: ಕಾನೂನು ಬಾಹಿರವಾಗಿ ಸಿಬಿಐ ನಿರ್ದೇಶಕರ ವಜಾಗೊಳಿಸಿದ್ದಲ್ಲದೆ, ಆರ್‌ಬಿಐ ಮೇಲೆ ಸವಾರಿ ಮಾಡುವ ಮೂಲಕ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಆರ್‌ಬಿಐಯನ್ನು ದುರ್ಬಲಗೊಳಿಸಲು ಮುಂದಾಗಿದೆ ಎಂದು ಕಾರ್ಪೊರೇಟರ್, ಡಿಸಿಸಿ ವಕ್ತಾರ ಎ.ಸಿ.ವಿನಯರಾಜ್ ಆರೋಪಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ದೇಶದ ಆರ್ಥಿಕತೆಯನ್ನು ಸುದೃಢವಾಗಿಡಲು ಮತ್ತು ನಿಯಂತ್ರಿಸಲಿರುವ ಸಾಂವಿಧಾನಿಕ ಸಂಸ್ಥೆಯಾಗಿರುವ ಆರ್‌ಬಿಐಯನ್ನು ಕೇಂದ್ರ ಸರಕಾರ ಹದ್ದು ಬಸ್ತಿನಲ್ಲಿಡಲು ಮುಂದಾಗಿದೆ. ಕೇಂದ್ರ ಸರಕಾರದ ಆರ್ಥಿಕ ನೀತಿ ಶೋಚನೀಯ ವಾಗಿದೆ. ಇದರಿಂದ ದೇಶ ದಿವಾಳಿಯಂಚಿಗೆ ತಲುಪಿವೆ. ಇದನ್ನು ಆರ್‌ಬಿಐನ ಮಾಜಿ ಹಾಗೂ ಹಾಲಿ ಗವರ್ನರ್‌ಗಳು ಆಕ್ಷೇಪಿಸಿದ್ದಾರೆ. ಸರಕಾರದ ಅನೀತಿಯನ್ನು ಒಪ್ಪಲು ಆರ್‌ಬಿಐ ಸಿದ್ಧವಿಲ್ಲ. ಹಾಗಾಗಿಯೇ ಮೋದಿಯು ಸಿಬಿಐ ಮೇಲೆ ಸವಾರಿ ಮಾಡಲು ಹೊರಟಿದೆ ಎಂದರು.
ಆರ್‌ಬಿಐನ ರಿಸರ್ವ್ ಫಂಡ್‌ನಲ್ಲಿರುವ 3.6 ಲಕ್ಷ ಕೋ.ರೂ.ವನ್ನು ಕೇಂದ್ರ ಸರಕಾರ ಕೇಳುತ್ತಿರುವುದು ಅದರ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ನಾನ್‌ಬ್ಯಾಂಕಿಂಗ್ ಫೈನಾನ್ಸಿಯಲ್ ಕಾರ್ಪೊರೇಶನ್‌ಗೆ ಆರ್‌ಬಿಐ ಬಳಿಯಿರುವ ರಿಸರ್ವ್ ಫಂಡನ್ನು ನಷ್ಟದಲ್ಲಿರುವ ಕಂಪೆನಿಗಳಿಗೆ ಕೊಡಬೇಕು ಎಂದು ಸರಕಾರದ ಕಲಂ 7ರ ಅಡಿಯಲ್ಲಿ ಕೇಳುತ್ತಿದೆ. ಆರ್‌ಬಿಐ ಬಳಿಯಿರುವ ಈ ಹಣ ದೇಶದ ಹಣವಾಗಿದೆ. ಅದನ್ನು ಕಾಪಾಡಲು ಆರ್‌ಬಿಐಯ ಕರ್ತವ್ಯವಾಗಿದೆ. ಆದರೆ ಆ ಕರ್ತವ್ಯ ಪಾಲಿಸಲು ಕೇಂದ್ರ ಸರಕಾರ ಬಿಡುತ್ತಿಲ್ಲ.ಆರ್ಥಿಕ ತಜ್ಞರಲ್ಲದ ಬಿಜೆಪಿಯ ಕಟ್ಟಾಳುಗಳಾದ ಗುರುಮೂರ್ತಿ ಮತ್ತು ಸತೀಶ್ ಮರಾಠೆ ಅವರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವುದು ಕೂಡಾ ಆ ಸಂಸ್ಥೆಯ ಘನತೆಗೆ ಹೊಡೆತ ನೀಡಿದೆ ಎಂದು ವಿನಯರಾಜ್ ಹೇಳಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ 10 ವರ್ಷದ ಅವಧಿಯಲ್ಲಿ ಸರಾಸರಿ ಜಿಡಿಪಿ ಶೇ.8.1 ಆಗಿದ್ದರೆ, ಮೋದಿ ನೇತೃತ್ವದ ಬಿಜೆಪಿ ಸರಕಾರದ ಜಿಡಿಪಿಯು ಶೇ.5.73 ಆಗಿದೆ. ಇದರಿಂದ ರೂಪಾಯಿ ಬೆಲೆ ಕುಸಿಯುತ್ತಲೇ ಇದೆ. ನೋಟುಗಳ ಅಪವೌಲ್ಯ, ನಗದುರಹಿತ ಆರ್ಥಿಕ ನೀತಿ, ಜಿಎಸ್‌ಟಿ ಜಾರಿ, ಕೈಗಾರಿಕೋದ್ಯಮಿಗಳ 1,50,000 ಲಕ್ಷ ಕೋ.ರೂ. ಸಾಲ ಮನ್ನಾ, ಬೇಕಾಬಿಟ್ಟಿ ಕಂಪೆನಿಗಳಿಗೆ ಸಾಲ ನೀಡಿಕೆ ಇತ್ಯಾದಿಯಿಂದ ದೇಶದ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ. ನೀರವ್ ಮೋದಿ, ಲಲಿತ್ ಮೋದಿ, ಮೆಹುಲ್ ಜೋಕ್ಸಿ, ವಿಜಯ ಮಲ್ಯಾರಂತಹ ಉದ್ಯಮಿಗಳು ದೇಶಕ್ಕೆ ವಂಚಿಸಿ ವಿದೇಶಕ್ಕೆ ಪಲಾಯನ ಮಾಡಲು ಮೋದಿಯೇ ಕಾರಣ. ಸುಮಾರು 40 ಸಾವಿರ ಕೋ.ರೂ. ಸಾಲದಲ್ಲಿ ಮುಳುಗಿರುವ ಅನಿಲ್ ಅಂಬಾನಿಗೆ ಎಲ್ಲಾ ನಿಯಮಾಳಿಗಳನ್ನು ಮೀರಿ 126 ಯುದ್ಧ ವಿಮಾನಗಳ ಬದಲು ಕೇವಲ 36 ಯುದ್ಧ ವಿಮಾನಗಳನ್ನು ತಲಾ ಒಂದಕ್ಕೆ 526 ಕೋ.ರೂ. ಬದಲು 1,114 ಕೋ.ರೂ. ಪಾವತಿಸಿ ಖರೀದಿಸಲು ಫ್ರಾನ್ಸಿನ ಡೆಸಾಲ್ಟ್ ಏವಿಯೇಶನ್ ಕಂಪೆನಿಗೆ ವ್ಯಾಪಾರ ಕುದಿರಿಸಲು ಕೂಡಾ ಮೋದಿ ಕಾರಣ. ಇದರಿಂದ ದೇಶದ ಬೊಕ್ಕಸಕ್ಕೆ 41 ಸಾವಿರ ಕೋ.ರೂ. ನಷ್ಟವಾಗಿದೆ ಎಂದು ವಿನಯರಾಜ್ ಹೇಳಿದರು.
11 ಬ್ಯಾಂಕ್‌ಗಳಲ್ಲಿ ಹಣವೇ ಇಲ್ಲ: ದ.ಕ.ಜಿಲ್ಲಾ ಮೂಲದ ಬ್ಯಾಂಕ್ ಸಹಿತ ದೇಶದ 11 ಬ್ಯಾಂಕ್‌ಗಳಲ್ಲಿ ವಹಿವಾಟು ಮಾಡಲು ಹಣವೇ ಇಲ್ಲ. ಇದರಿಂದ ಈ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಜನರು ಸರದಿ ಸಾಲಿನಲ್ಲಿ ನಿಂತರೂ ಸಾಲ ಸಿಗುತ್ತಿಲ್ಲ. ಬ್ಯಾಂಕ್‌ಗಳ ಈ ದುಸ್ಥಿತಿಗೆ ಮೋದಿಯೇ ದುರಾಡಳಿತವೇ ಕಾರಣ ಎಂದು ನ್ಯಾಯವಾದಿ ಹಾಗು ಡಿಸಿಸಿ ವಕ್ತಾರ ನವನೀತ್ ನುಡಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಉಪಾಧ್ಯಕ್ಷರಾದ ಸದಾಶಿವ ಉಳ್ಳಾಲ್, ಅಪ್ಪಿ, ಪ್ರಧಾನ ಕಾರ್ಯದರ್ಶಿಗಳಾದ ಖಾಲಿದ್ ಉಜಿರೆ, ನೀರಜ್ ಪಾಲ್, ಕಾರ್ಯದರ್ಶಿ ಗಳಾದ ಪ್ರೇಮನಾಥ ಬಲ್ಲಾಳ್‌ಬಾಗ್, ವಿಶ್ವಾಸ ಕುಮಾರ್ ದಾಸ್, ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಉಪಸ್ಥಿತರಿದ್ದರು.







