ದಾವಣಗೆರೆ: ಯುವಕನ ಕೊಲೆ ಪ್ರಕರಣ; ಮೂವರು ಆರೋಪಿಗಳ ಬಂಧನ

ದಾವಣಗೆರೆ,ನ.7: ಇತ್ತೀಚೆಗೆ ಹರಿಹರದ ವಿದ್ಯಾನಗರದ ಬಳಿ ನಡೆದ ಯುವಕ ಕಾಂತರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ತಾಲೂಕಿನ ಬನ್ನಿಕೋಡು ಗ್ರಾಮದ ಪ್ರಸನ್ನ (21), ಹರಿಹರ ಇಂದಿರಾ ನಗರದ ಪ್ರಶಾಂತ ಹಾಗೂ ಮತ್ತೋರ್ವ ಬಾಲಾಪರಾಧಿಯಾಗಿದ್ದಾನೆ. ಕೃತ್ಯಕ್ಕೆ ಬಳಸಿದ ಚಾಕು, ಮಚ್ಚು, ಆಟೋವನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ವಿಚಾರಣೆ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೃತ ಯುವಕ ಮತ್ತು ಆರೋಪಿಗಳೊಂದಿಗಿದ್ದ ಹಣಕಾಸಿನ ವ್ಯವಹಾರ ಮತ್ತು ವೈಯಕ್ತಿಕ ವೈಷ್ಯಮ್ಯಗಳಿಂದ ಈ ಕೃತ್ಯ ನಡೆಸಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಅಭಿನಂದಿಸಿ ಬಹುಮಾನ ಘೋಷಿಸಿದ್ದಾರೆ.
ಗೋಷ್ಠಿಯಲ್ಲಿ ಗ್ರಾಮಾಂತರ ಡಿವೈಎಸ್‍ಪಿ ಎಂ.ಕೆ.ಗಂಗಲ್, ಸಿಪಿಐ ಗುರುನಾಥ, ಹರಿಹರನಗರ ಪಿಎಸ್‍ಐ ಶ್ರೀಧರ ಇದ್ದರು.
ಶೀಘ್ರ ಬಂಧನ
ಕಕ್ಕರಗೊಳ್ಳ ಗ್ರಾಮದ ಯುವತಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶೇ. 90ರಷ್ಟು ತನಿಖೆ ಮುಕ್ತಾಯಗೊಂಡಿದ್ದು, ಕೆಲ ಎಫ್‍ಎಸ್‍ಎಲ್ ವರದಿ ಬಂದ ನಂತರ ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು. ಅಲ್ಲದೆ, ನಗರದಿಂದ ಕೊಂಡಜ್ಜಿವರೆಗೆ ಈಗ ಕೆಎಸ್‍ಆರ್‍ಟಿಸಿ ಬಸ್ ರಾತ್ರಿ 8.30ರ ವರೆಗೆ ಅವಕಾಶ ಕಲ್ಪಿಸಿದ್ದು, ರಾತ್ರಿ 9.30ರ ವರೆಗೆ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಕೆಎಸ್‍ಆರ್‍ಟಿಸಿ ಗೆ ಮನವಿ ಮಾಡಲಾಗಿದೆ. ಎಲ್ಲೆಲ್ಲಿ ಅವಶ್ಯಕತೆ ಇದೆ ಎಂಬುದನ್ನು ಸಾರ್ವಜನಿಕರು ತಿಳಿಸಿದರೆ ಅಂತಹ ಸ್ಥಳಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದೆಂದರು.







