ಬೆಂಗಳೂರು: ಮರಗಳ ಮೇಲೆ ಹೆಸರು ಕೆತ್ತಿದರೆ 500 ದಂಡ

ಸಾಂದರ್ಭಿಕ ಚಿತ್ರ
ಬೆಂಗಳೂರು, ನ.7: ಲಾಲ್ಬಾಗ್ನಲ್ಲಿ ವಿಹಾರಕ್ಕೆ ಆಗಮಿಸುವ ಸಾರ್ವಜನಿಕರು ಮರಗಳಿಗೆ ಹಾನಿ ಮಾಡುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಮರಗಳ ಮೇಲೆ ಹೆಸರು ಕೆತ್ತುವ ಅಥವಾ ಮರಕ್ಕೆ ಹಾನಿ ಮಾಡುವವರಿಗೆ 500 ದಂಡ ವಿಧಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ಲಾಲ್ಬಾಗ್ನ ಸೌಂದರ್ಯದ ಸೊಬಗನ್ನು ಸವಿದು ಹೋಗುವ ಬದಲು ಕೆಲವು ಪ್ರೇಮಿಗಳು, ಕುಚೇಷ್ಟೆ ಬುದ್ಧಿಯುಳ್ಳವರು ಮರಗಳ ಮೇಲೆ ತಮ್ಮ ಹೆಸರು, ಪ್ರೇಯಸಿಯ ಹೆಸರುಗಳನ್ನು ಕೆತ್ತುವ ಮೂಲಕ ಮರಗಳಿಗೆ ಹಾಗೂ ಪರಿಸರಕ್ಕೆ ಹಾನಿ ಮಾಡಲಾಗುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ದಂಡ ವಿಧಿಸಲು ಇಲಾಖೆ ತೀರ್ಮಾನಿಸಿದೆ.
ಮರಗಳನ್ನು ಕೆತ್ತುವುದರಿಂದಾಗುವ ಹಾನಿ: ತೊಗಟೆ ಮೇಲೆ ಕಾಂಡ ಕಾಣುವಂತೆ ಹೆಸರನ್ನು ಕೆತ್ತಿದರೆ ಮರಗಳಿಗೆ ತೀವ್ರ ಪ್ರಮಾಣದ ಹಾನಿ ಉಂಟಾಗುತ್ತದೆ. ಅವುಗಳ ಉಳಿವಿಗೂ ಧಕ್ಕೆ ಉಂಟಾಗುತ್ತದೆ. ಆದರೆ ನಾವು ಮರಗಳಿಗೆ ವಿನ್ಯಾಸ ಕೊಡುವಾಗ ಬೋಡಾಕ್ಸ್ ಮತ್ತಿತರ ರಾಸಾಯನಿಕಗಳನ್ನು ಲೇಪಿಸಿ ವಿನ್ಯಾಸವನ್ನು ಕೊಡುತ್ತೇವೆ. ಇದರಿಂದಾಗಿ ಕೊರೆದ ಜಾಗ ಮತ್ತೆ ಬೆಳೆಯುತ್ತದೆ. ಇದರಿಂದ ಮರಕ್ಕೆ ಯಾವುದೇ ರೀತಿ ಹಾನಿಯಾಗುವುದಿಲ್ಲ. ಮರಗಳ ಮೇಲೆ ಕೆತ್ತದಂತೆ ಒಂದು ತಿಂಗಳಿಂದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ ಇದೀಗ ಯಾರೂ ಕೆತ್ತುತ್ತಿಲ್ಲ. ಒಂದು ವೇಳೆ ಕೆತ್ತುವುದು ಕಂಡು ಬಂದರೆ 500 ರೂ.ವರೆಗೆ ದಂಡ ವಿಧಿಸಲಾಗುವುದು. ಈ ಬಗ್ಗೆ ನಮ್ಮ ಸಿಬ್ಬಂದಿ ಉದ್ಯಾನದಲ್ಲಿ ಸದಾ ನಿಗಾ ವಹಿಸುತ್ತಾರೆ ಎಂದು ರಾಜ್ಯ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಂ.ಆರ್.ಚಂದ್ರಶೇಖರ್ ತಿಳಿಸಿದ್ದಾರೆ.







