ಉಡುಪಿ: ಸಂಪೂರ್ಣ ದಿವ್ಯ ದರ್ಶನಂ ಬಿಡುಗಡೆ

ಉಡುಪಿ, ನ.5: ಮುಂಬೈ ಕಲಾ ಸೌರಭ ಇದರ ರಜತ ವರ್ಷಾಚರಣೆಯ ದ್ವಿತೀಯ ಕಾರ್ಯಕ್ರಮವಾಗಿ ಪುಣ್ಯ ಕ್ಷೇತ್ರಗಳ ಪರ್ಯಟನ ದೃಶ್ಯ ಹಾಗೂ ಗೀತಾ ನೃತ್ಯ ವೈಭವದ ವೀಡಿಯೋ- ಆಡಿಯೋ ‘ಸಂಪೂರ್ಣ ದಿವ್ಯ ದರ್ಶನಂ’ ಬಿಡುಗಡೆ ಸಮಾರಂಭ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮಂಗಳವಾರ ನಡೆಯಿತು.
ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಪುಣ್ಯ ಕ್ಷೇತ್ರಗಳ ಪರ್ಯಟನ ದೃಶ್ಯ ಹಾಗೂ ಗೀತಾ ನೃತ್ಯ ವೈಭವದ ವೀಡಿಯೊ ಆಡಿಯೋ ‘ಸಂಪೂರ್ಣ ದಿವ್ಯದರ್ಶನಂ’ನ್ನು ಬಿಡುಗಡೆ ಗೊಳಿಸಿದರು.
ಮುಂಬಯಿಯಿಂದ ಕಲೆಯ ಸೌರಭವನ್ನು ದೇಶದೆಲ್ಲೆಡೆ ಪಸರಿಸಲು ಈ ತಂಡ ಕರಾವಳಿಯ ಪರಿಮಳ ಪುಷ್ಪವಾದ ಮಲ್ಲಿಗೆಯ ಕಂಪಿನೊಂದಿಗೆ ಪ್ರಾರಂಭಿಸಿದ್ದಾರೆ. ಎಲ್ಲರಿಗೂ ಶ್ರೀಕೃಷ್ಣ ಮುಖ್ಯಪ್ರಾಣರ ಅನುಗ್ರಹವಾಗಲಿ ಎಂದು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಕಾಪು ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ, ಇಂದ್ರಾಳಿ ಜಯಕರ ಶೆಟ್ಟಿ, ಕೊಡವೂರು ದಿವಾಕರ ಶೆಟ್ಟಿ, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಸಂಯೋಜಕರಾದ ಪದ್ಮನಾಭ ಸಸಿಹಿತ್ಲು, ಸಮನ್ವಯಕಾರರಾದ ತೋನ್ಸೆ ಪುಷ್ಕಳ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಮುಂಬೈ ಹಾಗೂ ಕರ್ನಾಟಕ ಕರಾವಳಿಯ ಕಲಾವಿದರಿಂದ ರಾಗ ನಾಟ್ಯ ಸಾಂಸ್ಕೃತಿಕ ಸಂಭ್ರಮ ಜರುಗಿತು. ಇದರಲ್ಲಿ ಉಡುಪಿ ಸೃಷ್ಟಿ ನೃತ್ಯ ಕಲಾ ಕುಟೀರದ ಡಾ.ಮಂಜರಿಚಂದ್ರ ಬಳಗದಿಂದ ಭರತನಾಟ್ಯ, ದಶಾವತಾರ ರೂಪಕ, ಕಲಾವತಿ ದಯಾನಂದ್ ಹಾಗೂ ಬಳಗದಿಂದ ಭಕ್ತಿಗೀತೆ, ಜಾನಪದ ಸಂಗೀತ ಮತ್ತು ಯಕ್ಷಗಾನ, ಭಾವನೃತ್ಯ ಸಂಗಮ ಜರುಗಿತು.







