ಗೋವಿಂದರಾಜ ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ: ಶಾಸಕ ವಿ.ಸೋಮಣ್ಣ
ಸರಗಳ್ಳತನ, ಅಕ್ರಮ ಚಟುವಟಿಕೆ ತಡೆಗೆ ಕ್ರಮ

ಬೆಂಗಳೂರು, ನ.7: ಇಲ್ಲಿನ ಗೋವಿಂದರಾಜ ನಗರ ವ್ಯಾಪ್ತಿಯಲ್ಲಿ ಸರಗಳ್ಳತನ, ಅಪರಾಧ ಚಟುವಟಿಕೆ ಹಾಗೂ ವಾಹನ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣಗಳ ಪತ್ತೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 175ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಶಾಸಕ ವಿ.ಸೋಮಣ್ಣ ತಿಳಿಸಿದರು.
ಗೋವಿಂದರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲ ವಾರ್ಡ್‌ಗಳಲ್ಲಿ ಆಕ್ಟ್ ಸಂಸ್ಥೆಯ ಸಹಯೋಗದಲ್ಲಿ ಸುಮಾರು 175 ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕ್ಷೇತ್ರದಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸರಗಳ್ಳತನ, ಅಪರಾಧ ಪ್ರಕರಣಗಳು ಸಂಭವಿಸಿದಲ್ಲಿ ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸಲು, ಹಾಗೂ ಅಪರಾಧಿಗಳ ಚಲನವಲನಗಳನ್ನು ಗಮನಿಸಲು ಸಿಸಿ ಕ್ಯಾಮೆರಾ ಅಳವಡಿಕೆ ಸಹಾಯಕವಾಗಲಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸಾರ್ವಜನಿಕರ ಸುರಕ್ಷತೆ, ರಕ್ಷಣೆ ನಮ್ಮ ಜವಾಬ್ದಾರಿ ಎಂದು ಅವರು ಹೇಳಿದರು.
ಗೋವಿಂದರಾಜನಗರ ವಾರ್ಡ್ ಪಾಲಿಕೆ ಸದಸ್ಯ ಕೆ.ಉಮೇಶ್ ಶೆಟ್ಟಿ ಮಾತನಾಡಿ, ಬೆಂಗಳೂರು ಇಂದು ವಿಶ್ವದ ಹತ್ತು ಮಹಾನಗರಗಳಲ್ಲಿ ಒಂದು. ಶರವೇಗದಲ್ಲಿ ಬೆಳವಣಿಗೆಯಾಗುತ್ತಿರುವ ಬೆಂಗಳೂರು ನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಜನತೆಯ ಸುರಕ್ಷತೆಯನ್ನು ಕಾಪಾಡುವುದು ಜನಪ್ರತಿನಿಧಿಗಳ ಜವಾಬ್ದಾರಿಯೆಂದು ತಿಳಿಸಿದರು.







