ಟಿಪ್ಪು ಜಯಂತಿ ವಿರುದ್ಧ ನ.9ರಂದು ಬಿಜೆಪಿ ಪ್ರತಿಭಟನೆ
ಉಡುಪಿ, ನ.7: ಕಳೆದ ಹಲವು ವರ್ಷಗಳ ಜನರ ತೀವ್ರ ವಿರೋಧದ ಹೊರತಾಗಿಯೂ ರಾಜ್ಯ ಸರಕಾರ ಟಿಪ್ಪುವಿನ ಜಯಂತಿಯನ್ನು ನ.10ರಂದು ನಡೆಸಲು ನಿರ್ಧರಿಸಿದ್ದು, ಇದರ ವಿರುದ್ಧ ಬಿಜೆಪಿ ಪಕ್ಷ ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸಿದಾಗ ಅದನ್ನು ವಿರೋಧಿಸಿದ್ದ ಕುಮಾರಸ್ವಾಮಿ ಈಗ ಸಮ್ಮಿಶ್ರ ಸರಕಾರದ ನಾಯಕನಾಗಿ ಈ ಬಾರಿ ನ.10ರಂದು ಟಿಪ್ಪು ಜಯಂತಿ ಆಚರಿಸಲು ಮುಂದಾಗಿರುವುದು ಅವರ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಈ ಬಾರಿ ಸಾರ್ವಜನಿಕವಾಗಿ ಅಲ್ಲದಿದ್ದರೂ, ಪ್ರತೀ ಜಿಲ್ಲಾ ಮಟ್ಟದಲ್ಲಿ ನಡೆಯುತಿದ್ದು, ಇದಕ್ಕೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಇದಕ್ಕೆ ವಿರೋಧ ಸೂಚಿಸಲಿದೆ. ಉಡುಪಿಯ ಜಿಲ್ಲಾ ಕಚೇರಿ ಎದುರು ನ.9ರಂದು ಸಂಜೆ 4 ಗಂಟೆಗೆ ಪ್ರತಿಭಟನೆ ನಡೆಯಲಿದೆ ಎಂದು ಮಟ್ಟಾರು ತಿಳಿಸಿದರು.
ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಗೆ ಆಗ್ರಹ: ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆದು ಈಗಾಗಲೇ ಎರಡು ತಿಂಗಳು ಮುಗಿದಿದ್ದು, ಇನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯದೇ ಗೊಂದಲ ಮುಂದುವರಿದಿದೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡಲಾಗುತ್ತಿದೆ. ನಗರ ಸ್ಥಳೀಯಾ ಡಳಿತ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯನ್ನು ಫಲಿತಾಂಶ ಬರುತಿದ್ದಂತೆ ಬದಲಾಯಿಸಿದ್ದು ಈಗಿನ ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ ಎಂದವರು ಆರೋಪಿಸಿದರು.
ನ್ಯಾಯಾಲಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಹಾದಿ ಸುಗಮಗೊಳಿಸಿದ್ದರೂ, ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಮತ್ತೆ ವಿಳಂಬ ಮಾಡಲಾಗಿದೆ. ಇದೀಗ ಚುನಾವಣೆ ಮುಗಿದಿದ್ದು, ಕೂಡಲೇ ಜಿಲ್ಲೆಯ ನಾಲ್ಕು ನಗರ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಆದೇಶ ಹೊರಡಿಸಬೇಕು ಎಂದು ಅವರು ಜಿಲ್ಲಾದಿಕಾರಿಯನ್ನು ಒತ್ತಾಯಿಸಿದರು.
ಬಿಜೆಪಿ ಭದ್ರ: ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ನಿರೀಕ್ಷೆಯಂತೆ ಜಯಗಳಿಸಿದ್ದು, ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಗೆ 14,500 ಮತಗಳ ಮುನ್ನಡೆ ದೊರಕಿರುವುದರಿಂದ ಜಿಲ್ಲೆಯ ಬಿಜೆಪಿಯ ಸ್ಥಾನ ಭದ್ರವಾಗಿರುವುದು ಸಾಬೀತಾಗಿದೆ ಎಂದು ಮಟ್ಟಾರು ತಿಳಿಸಿದರು.







