ಮಂಗಳೂರು ವಿವಿಗೆ ಕುಲಪತಿ ನೇಮಕ: ಸ್ಥಳೀಯರನ್ನು ಪರಿಗಣಿಸಲು ಸಿಎಂಗೆ ಮನವಿ
ಮಂಗಳೂರು, ನ.7: ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಶೀಘ್ರವೇ ಕುಲಪತಿಯನ್ನು ನೇಮಕ ಮಾಡಬೇಕು ಹಾಗೂ ಮಂಗಳೂರು ವಿವಿಯ ಹಳೆ ವಿದ್ಯಾರ್ಥಿಗಳಾಗಿರುವ ಮತ್ತು ಸಮರ್ಥ ಸ್ಥಳೀಯರನ್ನು ನೇಮಕಾತಿ ಸಂದರ್ಭದಲ್ಲಿ ಪರಿಗಣಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವುದಾಗಿ ಮಂಗಳೂರು ವಿವಿ ಹಳೆ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಂಗಳೂರು ವಿವಿ ಸ್ಥಾಪನೆಯಾದ ಬಳಿಕ ಇದುವರೆಗೆ 38 ವರ್ಷಗಳಲ್ಲಿ ಎಂಟು ಕುಲಪತಿಗಳು ಕಾರ್ಯನಿರ್ವಹಿಸಿದ್ದಾರೆ. ಆದರೆ ಈ ಪೈಕಿ ಒಬ್ಬರನ್ನು ಹೊರತುಪಡಿಸಿ ಉಳಿದವರು ಯಾರು ಸ್ಥಳೀಯರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯರನ್ನು ನೇಮಿಸುವುದರಿಂದ ವಿವಿ ವ್ಯಾಪ್ತಿಯ ಸಮಸ್ಯೆಗಳನ್ನು ಸಮರ್ಥವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಸ್ಥಳೀಯವಾಗಿ ಉತ್ತಮ ಸಾಮಾಜಿಕ ಸಂಬಂಧವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಮಂಗಳೂರು ವಿವಿ ವಿದ್ಯಾರ್ಥಿಗಳಾಗಿ ಉತ್ತಮ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿರುವವರು ಹಲವರು ಕುಲಪತಿಯಾಗುವ ಅರ್ಹತೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅನುಭವವನ್ನು ಪರಿಗಣಿಸಬೇಕು ಎಂದು ದಿನೇಶ್ ಆಳ್ವ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಗಣೇಶ್ ಪೂಜಾರಿ, ಮಧುಸೂದನ್ ಭಟ್, ವೇಣು ಶರ್ಮ ಉಪಸ್ಥಿತರಿದ್ದರು.





