ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಜಾರಿಗೆ ಚಿಂತನೆ
ಬೆಂಗಳೂರು, ನ.7: ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರವೇ ಬೈಕ್ ಟ್ಯಾಕ್ಸಿ ಸೇವೆ ಜಾರಿ ಮಾಡಲು ಚಿಂತನೆ ನಡೆಸಿದ್ದು, ಶೀಘ್ರವೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾರಿಗೆ ಇಲಾಖೆ ರಚಿಸಿರುವ ಸಮಿತಿಯ ಶಿಫಾರಸ್ಸು ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ವಿಧಿ ಎಂಬ ಸಂಸ್ಥೆ ತಯಾರಿಸಿದ್ದ ಬೆಂಗಳೂರಲ್ಲಿ ಸಮರ್ಥ ಹಾಗೂ ಸುಸ್ಥಿರ ಸಾರಿಗೆ ವ್ಯವಸ್ಥೆ ವರದಿ ಕುರಿತು ಚರ್ಚೆ ನಡೆಸಿದ್ದ ಸಾರಿಗೆ ಇಲಾಖೆ, ನಗರದಲ್ಲಿ ಬೈಕ್ ಟ್ಯಾಕ್ಸಿ ಯೋಜನೆ ಜಾರಿಗೊಳಿಸುವುದರ ಕುರಿತಂತೆ ಸಮಿತಿ ರಚಿಸಿತ್ತು ಎಂದು ಜಿಲ್ಲಾಧಿಕಾರಿ ಬಿಎಂ ವಿಜಯಶಂಕರ್ ತಿಳಿಸಿದ್ದಾರೆ.
ಈ ಸಂಬಂಧ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದ ಸಮಿತಿಯಲ್ಲಿ ಸಾರಿಗೆ ಆಯುಕ್ತರು, ಬಿಎಂಟಿಸಿ ಎಂಡಿ, ಹೆಚ್ಚುವರಿ ಪೊಲೀಸ್ ಆಯುಕ್ತರು, ಡಲ್ಟ್ ನಿರ್ದೇಶಕರು, ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಹಾಗೂ ವಿಧಿ ಸಂಸ್ಥೆಯ ಸದಸ್ಯರೊಬ್ಬರು ಪ್ರತಿನಿಧಿಯಾಗಿದ್ದಾರೆ.
ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿ ಆಟೋ ಸೇರಿ ವಾಣಿಜ್ಯ ವಾಹನಗಳ ಮೇಲೆ ಜಾಹೀರಾತುಗಳಿಗೆ ಕಡಿವಾಣ ಹಾಕಲು ಉಪಸಮಿತಿಯೊಂದನ್ನು ರಚಿಸಲು ಆರ್‌ಟಿಒ ನಿರ್ಧರಿಸಿದೆ.







