ಬಹುಕೋಟಿ ಮೊತ್ತದ ಭೂ ಹಗರಣ: ಮಾಜಿ ಸಚಿವ, 8 ಐಎಎಸ್ ಅಧಿಕಾರಿಗಳ ಹೆಸರಿಸಿದ ಸಿಟ್

ವಿಜಯವಾಡ, ನ. 7: ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಬಹುಕೋಟಿ ಭೂ ಹಗರಣದಲ್ಲಿ ವಿಶೇಷ ತನಿಖಾ ತಂಡ (ಸಿಟ್) ಪ್ರತಿಪಕ್ಷ ವೈಎಸ್‌ಆರ್ ಕಾಂಗ್ರೆಸ್‌ನ ಮಾಜಿ ಕಂದಾಯ ಸಚಿವ ಧರ್ಮಣ ಪ್ರಸಾದ್ ರಾವ್, 8 ಮಂದಿ ಹಿರಿಯ ಐಎಎಸ್ ಅಧಿಕಾರಿಗಳು ಹಾಗೂ ಸ್ಟಾಂಪ್ಸ್, ನೋಂದಣಿ ಇಲಾಖೆಯ ಜಿಲ್ಲಾ ಮಟ್ಟದ ಇತರ ಅಧಿಕಾರಿಗಳನ್ನು ಹೆಸರಿಸಿದೆ.
ವಿಶಾಖಪಟ್ಟಣಂ ನಗರದ ಸುತ್ತುಮತ್ತ ಹಾಗೂ 40 ಮಂಡಲಗಳಲ್ಲಿರುವ ಸರಕಾರದ 1,126 ಎಕರೆ ಸರಕಾರಿ ಭೂಮಿಯನ್ನು ಪ್ರತ್ಯೇಕಿಸಲು ಕಾರಣವಾದ ದಾಖಲೆ ತಿರುಚುವಿಕೆ ಕುರಿತು ನೀಡಿದ ದೂರಿನ ಹಿನ್ನೆಲೆಯಲ್ಲಿ ಕಳೆದ ವರ್ಷ ಆಂಧ್ರಪ್ರದೇಶ ಸರಕಾರ ರೂಪಿಸಿದ ಸಿಟ್ ತಂಡ ಮಂಗಳವಾರ ವಿವರವಾದ ವರದಿಯನ್ನು ರಾಜ್ಯ ಸಂಪುಟ ಸಭೆಯಲ್ಲಿ ಸಲ್ಲಿಸಿತ್ತು. ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಐಜಿಪಿ ವಿನೀತ್ ಬ್ರಿಜ್‌ಲಾಲ್, ಜಂಟಿ ಜಿಲಾಧಿಕಾರಿ ಜಿ. ಸೃಜನ್ ಹಾಗೂ ವಿಶಾಖಪಟ್ಟಣಂನ ಉಪ ಜಿಲ್ಲಾಧಿಕಾರಿ ಎಲ್. ವಿಜಯಶರದಿ ನೇತೃತ್ವದ ಸಿಟ್ ತಂಡ ಶಿಫಾರಸು ಮಾಡಿದೆ.
ಹಗರಣ ಬೆಳಕಿಗೆ ಬಂದಾಗ ಧರ್ಮಣ ಪ್ರಸಾದ್ ರಾವ್ ಕಂದಾಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾಜಿ ಯೋಧರಿಗೆ ನೀಡಲಾದ ಮೂರು ಎಕರೆ ಭೂಮಿಯನ್ನು ಅವರೇ ಪ್ರವರ್ತಕರಾಗಿದ್ದ ಮಧುರವಾಡ ಪ್ರದೇಶದಲ್ಲಿರುವ ಗ್ರಾನೈಟ್ ಹಾಗೂ ಮೈನಿಂಗ್ ರಫ್ತು ಕಂಪೆನಿ ವರ್ಗಾಯಿಸಲು ಆಡಳಿತ ಯಂತ್ರವನ್ನು ದುರ್ಬಳಕೆಗೊಳಿಸಿ ಆಕ್ಷೇಪ ರಹಿತ ಪ್ರಮಾಣ ಪತ್ರ ಪಡೆದುಕೊಂಡಿರುವ ಆರೋಪಕ್ಕೆ ಅವರು ಒಳಗಾಗಿದ್ದಾರೆ.





