ಕ್ರಿಶ್ಚಿಯನ್ನರ ಕಾರ್ಯಕ್ರಮಕ್ಕೆ ವಿಹಿಂಪ ಅಡ್ಡಿ

ಸಾಂದರ್ಭಿಕ ಚಿತ್ರ
ಅಹ್ಮದಾಬಾದ್, ನ.7: ಪವಿತ್ರಾತ್ಮದೊಂದಿಗೆ ಮುಖಾಮುಖಿ ಎಂಬ ಹೆಸರಿನಲ್ಲಿ ಕೇರಳ ಮೂಲದ ಕ್ರೈಸ್ತ ಧರ್ಮಗುರು ಗುಜರಾತ್ನ ಸ್ಥಳೀಯ ಚರ್ಚ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ವಿಶ್ವ ಹಿಂದು ಪರಿಷದ್(ವಿಹಿಂಪ) ಸೇರಿದಂತೆ ಸ್ಥಳೀಯ ಸಂಘ ಪರಿವಾರದ ಸಂಘಟನೆಗಳು ಅಡ್ಡಿಪಡಿಸಿದ ಘಟನೆ ನಡೆದಿದೆ.
ಬಳಿಕ ಕಾರ್ಯಕ್ರಮದ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಥಳೀಯ ಚರ್ಚ್ನ ಪ್ರತಿನಿಧಿ, ಇದೊಂದು ಕ್ರಿಶ್ಚಿಯನ್ನರು ನಡೆಸುವ ಸಭೆಯಾಗಿದ್ದು ಸಭೆಯಲ್ಲಿ ಕೇರಳ ಜಲಪ್ರಳಯದಲ್ಲಿ ಮಡಿದವರೂ ಸೇರಿದಂತೆ ಸ್ಥಳೀಯ ಕ್ರಿಶ್ಚಿಯನ್ ಸಮುದಾಯದಲ್ಲಿ ಮೃತಪಟ್ಟವರ ಏಳಿಗೆಗಾಗಿ ಪ್ರಾರ್ಥನೆ ಸಲ್ಲಿಸುವ ಉದ್ದೇಶವಿದೆ. ಗುರುವಾರ ಮತ್ತು ಶುಕ್ರವಾರವೂ ಕಾರ್ಯಕ್ರಮ ನಡೆಯಲಿದ್ದು ಇಲ್ಲಿ ಧಾರ್ಮಿಕ ಮತಾಂತರದ ಉದ್ದೇಶವಿಲ್ಲ ಎಂದು ತಿಳಿಸಿದ್ದಾರೆ.
ಮಣಿನಗರದಲ್ಲಿರುವ ಶ್ರೀ ಮುಕ್ತಜೀವನ ಆಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಸಲು ಎರಡು ತಿಂಗಳ ಮೊದಲೇ ಸ್ಥಳ ಕಾಯ್ದಿರಿಸಲಾಗಿದೆ. ಆದರೆ ಮಂಗಳವಾರ ಕೆಲವು ಸಂಘಟನೆಗಳ ಕಾರ್ಯಕರ್ತರು ಅಡಿಟೋರಿಯಂನ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಆಡಿಟೋರಿಯಂನ ಮಾಲಕರು ನಮ್ಮಿಂದ ವಿವರಣೆ ಕೇಳಿದ್ದಾರೆ. ಆದರೆ ಇಲ್ಲಿ ಯಾವುದೇ ಧಾರ್ಮಿಕ ಮತಾಂತರ ಕಾರ್ಯ ನಡೆಯುತ್ತಿಲ್ಲ ಎಂದು ತಿಳಿಸಿರುವುದಾಗಿ ಚರ್ಚ್ನ ಧರ್ಮಗುರು ತಿಳಿಸಿದ್ದಾರೆ. ಸುಮಾರು 500 ಜನ ಸೇರುವ ನಿರೀಕ್ಷೆಯಿದ್ದು ಕಾರ್ಯಕ್ರಮ ನಿಗದಿಯಾದಂತೆ ನಡೆಯಲಿದೆ ಎಂದವರು ಸ್ಪಷ್ಟಪಡಿಸಿದ್ದಾರೆ. ಯಾವುದೇ ಧರ್ಮದವರು ತಮ್ಮ ಧಾರ್ಮಿಕ ಸಂಸ್ಥೆಯ ಆವರಣದೊಳಗೆ ನಡೆಸುವ ಕಾರ್ಯಕ್ರಮಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಹಿಂದು ಧರ್ಮ, ದೇವರುಗಳನ್ನು ಅವಹೇಳನ ಮಾಡುವುದನ್ನು ನಾವು ಒಪ್ಪುವುದಿಲ್ಲ ಎಂದು ಗುಜರಾತ್ ವಿಹಿಂಪ ಅಧ್ಯಕ್ಷ ಅಶೋಕ್ ರಾವಲ್ ತಿಳಿಸಿದ್ದಾರೆ.







