ಹೊಸ ತಿರುವು ಪಡೆದುಕೊಂಡ ನಿತೀಶ್ ಕುಮಾರ್ - ಉಪೇಂದ್ರ ಕುಶ್ವಾಹ ನಡುವಿನ ಕಚ್ಚಾಟ

ಹೊಸದಿಲ್ಲಿ,ನ.7: ಕೇಂದ್ರ ಸಚಿವ ಹಾಗೂ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ(ಆರ್ಎಲ್ಎಸ್ಪಿ)ಯ ನಾಯಕ ಉಪೇಂದ್ರ ಕುಶ್ವಾಹ ಅವರು ತನ್ನ ಪ್ರತಿಕ್ರಿಯೆಗೂ ಅರ್ಹರಾಗಿಲ್ಲ ಎಂಬ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೇಳಿಕೆಯ ಬಳಿಕ ಅವರಿಬ್ಬರ ನಡುವಿನ ಕಚ್ಚಾಟ ಹೊಸ ತಿರುವನ್ನು ಪಡೆದುಕೊಂಡಿದೆ.
ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ ಮತ್ತು ಕುಮಾರ್ ಹೇಳಿಕೆಯ ‘ಸಂದರ್ಭ ಅಥವಾ ವಿಷಯ’ವನ್ನು ಸ್ಪಷ್ಟಪಡಿಸಲು ತಕ್ಷಣವೇ ಸಭೆಯೊಂದನ್ನು ಕರೆಯುವಂತೆ ಕೋರಿ ತಾನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆಯಲಿದ್ದೇನೆ ಎಂದು ಕುಶ್ವಾಹ ಹೇಳಿರುವುದನ್ನು ಆಂಗ್ಲ ಮಾಧ್ಯಮವೊಂದು ಉಲ್ಲೇಖಿಸಿದೆ.
ಆರ್ಎಲ್ಎಸ್ಪಿ,ಕುಮಾರ್ ನೇತೃತ್ವದ ಜೆಡಿಯು ಬಿಜೆಪಿಯ ಮಿತ್ರಪಕ್ಷಗಳಾಗಿವೆ.
ತಾನು ಪ್ರತಿಕ್ರಿಯೆಗೂ ಅರ್ಹನಲ್ಲ ಎಂದು ಹೇಳುವ ಮೂಲಕ ತನ್ನನ್ನು ಕೆಳಮಟ್ಟಕ್ಕೆ ತಳ್ಳಿದ್ದೇಕೆ ಎಂದು ಕುಶ್ವಾಹ ಇತ್ತೀಚಿಗೆ ಕುಮಾರ್ ಅವರನ್ನು ಪ್ರಶ್ನಿಸಿದ್ದರು.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ಕುಮಾರ ಅವರು,2020ರ ಚುನಾವಣೆಗೆ ಸಂಬಂಧಿಸಿದಂತೆ ಕುಶ್ವಾಹ ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದರು.
ಇತರರನ್ನು ಗೌರವಿಸದಿರುವ ನಿತೀಶ್ ಅವರ ಗುಣವು ಅವರ ಡಿಎನ್ಎದಲ್ಲಿ ಏನೋ ದೋಷವಿದೆ ಎನ್ನುವುದನ್ನು ಸೂಚಿಸುತ್ತದೆ ಎಂದು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದ ಟೀಕೆಯನ್ನು ಪ್ರಸ್ತಾಪಿಸಿದ ಕುಶ್ವಾಹ ಅವರು,ತನ್ನ ಡಿಎನ್ಎ ವರದಿಯನ್ನು ಸಲ್ಲಿಸುವಂತೆ ನಿತೀಶ್ ಗೆ ಸೂಚಿಸಿದ್ದಾರೆ.
ನಿತೀಶ್ ಮತ್ತು ಕುಶ್ವಾಹ ನಡುವಿನ ಸಂಬಂಧ ಹದಗೆಟ್ಟಿದ್ದು,ಬಿಜೆಪಿ ಮತ್ತು ಜೆಡಿಯು 50:50 ಸ್ಥಾನಹಂಚಿಕೆಯ ಒಪ್ಪಂದ ಮಾಡಿಕೊಂಡ ಮರುದಿನ ಕುಶ್ವಾಹ ಆರ್ಜೆಡಿ ನಾಯಕ ತೇಜಸ್ವಿ ಯಾದವ ಅವರನ್ನು ಭೇಟಿಯಾಗಿದ್ದು ರಾಜಕೀಯ ವಲಯದಲ್ಲಿ ಹಲವರು ಹುಬ್ಬೇರಿಸುವಂತೆ ಮಾಡಿದೆ.
2020ರ ಬಳಿಕ ಕುಮಾರ ಮುಖ್ಯಮಂತ್ರಿ ಹುದ್ದೆಯನ್ನು ತೊರೆಯಬೇಕು ಎಂಬ ಕುಶ್ವಾಹ ಹೇಳಿಕೆ ಜೆಡಿಯು ಪಕ್ಷದಲ್ಲಿ ತೀವ್ರ ಅಸಮಾಧಾನವನ್ನುಂಟು ಮಾಡಿದೆ. ಸಿಎಂ ಹುದ್ದೆಯು ‘ರಸಗುಲ್ಲಾ’ ಅಲ್ಲ ಮತ್ತು ಕುಮಾರ ಜನರಿಂದ ಆಯ್ಕೆಯಾಗಿರುವುದರಿಂದ ತನ್ನ ಪಾತ್ರವನ್ನು ಅವರು ಮುಂದುವರಿಸುತ್ತಾರೆ ಎಂದು ಅದು ತಿರುಗೇಟು ನೀಡಿದೆ.





