ಭಾರತ-ಚೀನಾ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ

ಉತ್ತರಕಾಶಿ, ನ. 7: ಉತ್ತರಾಖಂಡದ ಇಂಡಿಯಾ-ಚೀನಾ ಗಡಿ ಸಮೀಪದ ಹರ್ಸಿಲ್‌ಗೆ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಸೇನೆ ಹಾಗೂ ಐಟಿಬಿಪಿ ಸಿಬ್ಬಂದಿಯೊಂದಿಗೆ ಬುಧವಾರ ದೀಪಾವಳಿ ಆಚರಿಸಿದ್ದಾರೆ. ಯೋಧರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ, ಹಿಮಾವೃತ ದುರ್ಗಮ ಪ್ರದೇಶದಲ್ಲಿ ಕರ್ತವ್ಯ ನಿರ್ವಹಣೆ ದೇಶವನ್ನು ಸಶಕ್ತಗೊಳಿಸಿದೆ, 125 ಕೋಟಿ ಭಾರತೀಯರ ಭವಿಷ್ಯ ಹಾಗೂ ಕನಸನ್ನು ರಕ್ಷಿಸಿದೆ ಎಂದು ಹೇಳಿದ್ದಾರೆ.
ದೀಪಾವಳಿ ಬೆಳಕಿನ ಹಬ್ಬ. ಇದು ಉತ್ತಮಿಕೆಯ ಬೆಳಕನ್ನು ಹರಡುತ್ತದೆ ಹಾಗೂ ಭೀತಿ ಹೊಡೆದೋಡಿಸುತ್ತದೆ. ಜನರಲ್ಲಿರುವ ಭೀತಿ ನಿವಾರಿಸುವ ಹಾಗೂ ಭದ್ರತೆಯ ಪ್ರಜ್ಞೆ ಹರಡಲು ಯೋಧರು ತಮ್ಮ ಬದ್ಧತೆ ಹಾಗೂ ಶಿಸ್ತಿನ ಮೂಲಕ ನೆರವು ನೀಡಬೇಕು ಎಂದು ಅವರು ಹೇಳಿದರು. ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಯೋಧರನ್ನು ಭೇಟಿಯಾಗಿರುವುದನ್ನು ಪ್ರಧಾನಿ ನರೇಂದ್ರ ಮೋದಿ ನೆನಪಿಸಿಕೊಂಡರು.
ಒಂದು ವರ್ಷದ ಹಿಂದೆ ಕೈಲಾಸ ಮಾನಸ ಸರೋವರಕ್ಕೆ ಯಾತ್ರೆ ನಡೆಸುತ್ತಿದ್ದ ಸಂದರ್ಭ ಅವರು ಇಂಡೋ-ಟೆಬೆಟಿಯನ್ ಬಾರ್ಡರ್ ಪೊಲೀಸ್‌ನ ಯೋಧರೊಂದಿಗೆ ಸಂವಹನ ನಡೆಸಿದ್ದರು. ರಕ್ಷಣಾ ವಲಯದಲ್ಲಿ ಭಾರತ ದಾಪುಗಾಲು ಇರಿಸುತ್ತಿದೆ ಎಂದು ಪ್ರಧಾನಿ ಅವರು ಹೇಳಿದರು. ಒಂದೇ ಶ್ರೇಣಿ, ಒಂದೇ ಪಿಂಚಣಿ ಸೇರಿದಂತೆ ನಿವೃತ್ತ ಯೋಧರರ ಕಲ್ಯಾಣಕ್ಕೆ ಕೈಗೊಳ್ಳಲಾದ ಹಲವು ಕ್ರಮಗಳ ಬಗ್ಗೆ ಮಾತನಾಡಿದರು. ಭಾರತದ ಸೇನಾ ಪಡೆ ಜಗತ್ತಿನಾದ್ಯಂತದ ಮೆಚ್ಚುಗಗೆ ಪಾತ್ರವಾಗಿದೆ ಎಂದು ಅವರು ಹೇಳಿದರು.







