ದೇವೇಗೌಡ, ಕುಮಾರಸ್ವಾಮಿಯವರನ್ನು ಭೇಟಿಯಾದ ಚಂದ್ರಬಾಬು ನಾಯ್ಡು

ಬೆಂಗಳೂರು, ನ.8: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಪಣ ತೊಟ್ಟಿರುವ ಆಂಧ್ರ ಪ್ರದೇಶದ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ವರಿಷ್ಠ ಎನ್.ಚಂದ್ರಬಾಬು ನಾಯ್ಡು ಅವರು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಇಂದು ಭೇಟಿಯಾದರು.
ಪದ್ಮನಾಭ ನಗರದ ನಿವಾಸದಲ್ಲಿಂದು ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾದ ಚಂದ್ರಬಾಬು ನಾಯ್ಡು ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಬಾಬು ನಾಯ್ಡು, ದೇಶವನ್ನು ರಕ್ಷಿಸಲು, ಪ್ರಜಾಪ್ರಭುತ್ವವನ್ನು ರಕ್ಷಿಸಲು ಬಿಜೆಪಿ ವಿರುದ್ಧ ಮೈತ್ರಿಕೂಟದಲ್ಲಿ ಕೈಜೋಡಿಸುವಂತೆ ದೇವೇಗೌಡನ್ನು ಕೇಳಿಕೊಂಡಿರುವುದಾಗಿ ತಿಳಿಸಿದರು.
ತೃತೀಯ ರಂಗದ ಬಗ್ಗೆ ಬಿಎಸ್ಪಿ ವರಿಷ್ಠೆ ಮಾಯಾವತಿಯೊಂದಿಗೆ, ಎಸ್ಪಿ ಅಧ್ಯಕ್ಷ ಅಖಿಲೇಶ್ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ಶುಕ್ರವಾರ ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದೇನೆ ಎಂದು ಚಂದ್ರಬಾಬು ನಾಯ್ಡು ಹೇಳಿದರು.
Next Story





