ರೆಡ್ಡಿ ನಿವಾಸದ ಮೇಲಿನ ದಾಳಿ ರಾಜಕೀಯ ಪ್ರೇರಿತ ಅಲ್ಲ: ಸಂಸದ ವಿ.ಎಸ್.ಉಗ್ರಪ್ಪ

ಬೆಂಗಳೂರು, ನ. 8: ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ನಿವಾಸದ ಮೇಲಿನ ಸಿಸಿಬಿ ದಾಳಿ ರಾಜಕೀಯ ಪ್ರೇರಿತ ಅಲ್ಲ ಎಂದು ಬಳ್ಳಾರಿಯ ನೂತನ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗಾಲಿ ಜನಾರ್ದನ ರೆಡ್ಡಿ ಅಕ್ರಮ ನಡೆಸಿರುವ ಕಾರಣಕ್ಕೆ ಅವರ ನಿವಾಸದ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಇದರಲ್ಲಿ ರಾಜ್ಯ ಸರಕಾರದ ಯಾವುದೇ ಹಸ್ತಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ, ಕೇಂದ್ರ ಸರಕಾರ ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ನಡೆಸಿದ ದಾಳಿ ರಾಜಕೀಯ ಪ್ರೇರಿತ ಎಂದು ದೂರಿದ ಉಗ್ರಪ್ಪ, ಜನತೆಗೆ ದುಬಾರಿ ಮೊತ್ತದ ಬಡ್ಡಿ ನೀಡುವ ಆಮಿಷವೊಡ್ಡಿ ವಂಚನೆ ಮಾಡಲಾಗಿದೆ. ಇದರ ವಿರುದ್ಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದರು.
ಆ್ಯಂಬಿಡೆಂಟ್ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಮುಖಂಡರು ಭಾಗಿಯಾಗಿಲ್ಲ. ಜನಪ್ರತಿನಿಧಿಗಳಾಗಿ ಅವರ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಆದರೆ, ನಮ್ಮ ಪಕ್ಷದ ಯಾವೊಬ್ಬ ಮುಖಂಡರೂ ಇದರಲ್ಲಿ ಭಾಗಿಯಾಗಿಲ್ಲ ಎಂದು ಉಗ್ರಪ್ಪ ಸ್ಪಷ್ಟಪಡಿಸಿದರು.





