ಬಳ್ಳಾರಿ, ಹೈದರಾಬಾದ್ ಸೇರಿದಂತೆ ಹಲವೆಡೆ ಹುಡುಕಾಟ: ರೆಡ್ಡಿಗಾಗಿ ಬೀಡುಬಿಟ್ಟ ಸಿಸಿಬಿ

ಬೆಂಗಳೂರು/ಬಳ್ಳಾರಿ, ನ.8: ಆ್ಯಂಬಿಡೆಂಟ್ ಕಂಪೆನಿ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ)ದ ತನಿಖೆ ಮೇಲೆ ಪ್ರಭಾವ ಬೀರಲು ಬರೋಬ್ಬರಿ 57 ಕೆಜಿ ಚಿನ್ನದ ಗಟ್ಟಿ ಪಡೆದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪತ್ತೆಗಾಗಿ, ರಾಜ್ಯದ ಗಡಿ ಪ್ರದೇಶ-ನೆರೆ ರಾಜ್ಯಗಳಲ್ಲಿ ಸಿಸಿಬಿ ತನಿಖಾಧಿಕಾರಿಗಳು ಬೀಡು ಬಿಟ್ಟಿದ್ದಾರೆ.
ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಜನಾರ್ದನ ರೆಡ್ಡಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ಬಳ್ಳಾರಿ, ಬೆಂಗಳೂರು, ನೆರೆ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶದಲ್ಲಿ ಜನಾರ್ದನ ರೆಡ್ಡಿಗಾಗಿ ಸಿಸಿಬಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ರೆಡ್ಡಿ ಸಂಬಂಧಿಕರ ಮತ್ತು ಆಪ್ತರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚಿನ್ನ ದಾಖಲೆ ಪತ್ತೆ: ಜನಾರ್ದನ ರೆಡ್ಡಿ ಅವರ ಪಾರಿಜಾತ ಅಪಾರ್ಟ್‌ಮೆಂಟ್‌ನಲ್ಲಿ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿದ ವೇಳೆ 57 ಕೆಜಿ ಚಿನ್ನ ಸಾಗಾಟದ ಕುರಿತು ಮಹತ್ವದ ದಾಖಲೆಗಳು ಲಭ್ಯವಾಗಿದೆ ಎನ್ನಲಾಗಿದೆ.
ಸಿಸಿಬಿ ಪೊಲೀಸರು ಬುಧವಾರ ಸತತ 6 ಗಂಟೆಗಳ ಕಾಲ ಜನಾರ್ದನ ರೆಡ್ಡಿಯ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ 57 ಕೆಜಿ ಚಿನ್ನ ಸಾಗಾಟ, ಈ ಚಿನ್ನ ಖರೀದಿ ಯಾವಾಗ? ಯಾರ ಹೆಸರಿನಲ್ಲಿ ಖರೀದಿಯಾಗಿದೆ ಎಂಬುದರ ಕುರಿತು ಮಹತ್ವದ ಎರಡು ದಾಖಲೆಗಳು ದೊರೆತಿದೆ ಎಂದು ಹೇಳಲಾಗುತ್ತಿದೆ.
ಬಳ್ಳಾರಿ ದಾಳಿ: ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿಯ ಒಡೆತನದ ಬಳ್ಳಾರಿಯ ಅಹಂಬಾವಿ ನಿವಾಸದ ಮೇಲೆ ಗುರುವಾರ ದಾಳಿ ನಡೆಸಿದ ಸಿಸಿಬಿ ಪೊಲೀಸರು ಶೋಧ ನಡೆಸಿದರು.
ಎರಡು ವಾಹನಗಳಲ್ಲಿ ಆಗಮಿಸಿದ ಒಟ್ಟು 8 ಮಂದಿ ಸಿಸಿಬಿ ಅಧಿಕಾರಿಗಳ ತಂಡ ಶೋಧ ಕಾರ್ಯದಲ್ಲಿ ತೊಡಗಿದರು. ಇದೇ ವೇಳೆ, ಶಾಸಕ ಶ್ರೀರಾಮುಲು ಅವರು ರೆಡ್ಡಿ ಮನೆ ಬಳಿ ದೌಡಾಯಿಸಿದರು ಎನ್ನಲಾಗಿದೆ.
ಅತ್ತೆಯ ಕೂಗಾಟ: ಬಳ್ಳಾರಿ ನಿವಾಸ ಅಹಂಬಾವಿ ಮೇಲೆ ದಾಳಿ ನಡೆಸಿದ ಸಿಸಿಬಿ ತನಿಖಾಧಿಕಾರಿಗಳ ಮೇಲೆ ಜನಾರ್ದನ ರೆಡ್ಡಿ ಅತ್ತೆ ನಾಗಲಕ್ಷ್ಮಮ್ಮ ಕೂಗಾಟ ನಡೆಸಿದರು ಎನ್ನಲಾಗಿದೆ.
ಮನೆಯಲ್ಲಿ ತನ್ನ ಮಗಳು ಹಾಗೂ ಅಳಿಯ ಇಲ್ಲದ ವೇಳೆ ಏಕೆ ಆಗಮಿಸಿದ್ದೀರಿ. ನಿಮಗೆ ಏನು ಬೇಕು? ನನ್ನ ಮಗಳು, ಅಳಿಯ ಬಂದ ಮೇಲೆ ಬನ್ನಿ ಎಂದು ತೆಲುಗು ಭಾಷೆಯಲ್ಲಿ ನಾಗಲಕ್ಷ್ಮಮ್ಮ ತನಿಖಾಧಿಕಾರಿಗಳಿಗೆ ಪ್ರಶ್ನೆ ಮಾಡಿದರು ಎಂದು ತಿಳಿದುಬಂದಿದೆ.
ಇಡಿ ಹೇಳಿದ್ದೇನು?: ಆ್ಯಂಬಿಡೆಂಟ್ ಕಂಪೆನಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಹೆಸರು ಕೇಳಿ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಇಡಿ ಅಧಿಕಾರಿಗಳು, ಆ್ಯಂಬಿಡೆಂಟ್ ಕಂಪೆನಿ ವಿರುದ್ಧ ನಾವು ಯಾವುದೇ ತನಿಖೆ ನಡೆಸಿಲ್ಲ. ಹೀಗಿರುವಾಗ, ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಹೆಸರು ಏಕೆ ಬಂದಿದೆಯೂ ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಫರೀದ್ ಯಾವುದೇ ಏಜೆನ್ಸಿಗೆ ಮಾಹಿತಿ ನೀಡದೆ ಗೌಪ್ಯವಾಗಿ ದುಬೈನಲ್ಲಿ ಒಂದು ಕಂಪೆನಿ ಪ್ರಾರಂಭಿಸಿದ್ದರು. ಅಲ್ಲಿ ವಿದೇಶಿ ಕರೆನ್ಸಿ ಬದಲಾವಣೆಯ ವಹಿವಾಟು ನಡೆಯುತ್ತಿತ್ತು. ಅದನ್ನು ಫೋರೆಕ್ಸ್ ಟ್ರೇಡಿಂಗ್ ಎಂದು ಕರೆಯಲಾಗುತ್ತದೆ. ನಾವು ಆ ಕಂಪೆನಿ ವಿರುದ್ಧ ತನಿಖೆ ನಡೆಸಿದ್ದೇವೆಯೇ ಹೊರತು, ಆ್ಯಂಬಿಡೆಂಟ್ ಕಂಪೆನಿ ವಿರುದ್ಧವಲ್ಲ ಎಂದು ಇಡಿಯ ಪ್ರಕಟನೆಯೊಂದು ತಿಳಿಸಿದೆ.
ಪ್ರಭಾವಿಗಳ ಹೆಸರು ಬಹಿರಂಗ?
ಗುರುವಾರ ಸಿಸಿಬಿ ಕಚೇರಿಯಲ್ಲಿ ತನಿಖಾಧಿಕಾರಿಗಳು ಆ್ಯಂಬಿಡೆಂಟ್ ಕಂಪೆನಿ ಮಾಲಕ ಎಸ್.ಎ.ಫರೀದ್‌ರನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಕಂಪೆನಿ ಮೂಲಕ ಯಾರನ್ನು ಸಂಪರ್ಕ ಮಾಡಿದ್ದೀಯಾ? ಎಷ್ಟು ಅವಧಿಯ ತೆರಿಗೆ ಪಾವತಿ ಮಾಡಿದ್ದೀಯಾ? ಬಡ್ಡಿ ನೀಡಲು ಹಣ ಎಲ್ಲಿಂದ ಬಂತು ಎಂದೆಲ್ಲಾ ಆರೋಪಿ ಫರೀದ್‌ರನ್ನು ಸಿಸಿಬಿ ತನಿಖಾಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದ್ದು, ಹಲವು ಪ್ರಭಾವಿ ವ್ಯಕ್ತಿಗಳಿಗೆ ಹಣ ಹಂಚಿಕೆ ಮಾಡಿರುವ ಮಾಹಿತಿ ಬಹಿರಂಗವಾಗಿದೆ ಎಂದು ಹೇಳಲಾಗುತ್ತಿದೆ.
ವಿಡಿಯೋ ಸೋರಿಕೆ
ಆ್ಯಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎಸ್.ಎ.ಫರೀದ್‌ನ ಪಂಚನಾಮೆ ಪಡೆಯುತ್ತಿದ್ದ ವಿಡಿಯೊ ಸೋರಿಕೆ ಆಗಿದ್ದು, ಈ ಕುರಿತು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್, ತನಿಖಾಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ ಎನ್ನಲಾಗಿದೆ.
ರೆಡ್ಡಿ ನಿವಾಸದ ಫೋಟೋ
ಬಳ್ಳಾರಿಯಲ್ಲಿರುವ ಗಾಲಿ ಜನಾರ್ದನ ರೆಡ್ಡಿ ಅವರ ಅಹಂಬಾವಿ ನಿವಾಸದ ಮೇಲೆ ದಾಳಿ ನಡೆಸಿದ ಸಿಸಿಬಿ ತನಿಖಾಧಿಕಾರಿ, ತಮ್ಮ ಮೊಬೈಲ್‌ಗಳಲ್ಲಿ ಫೋಟೋ ಪಡೆದುಕೊಂಡರು ಎಂದು ವರದಿಯಾಗಿದೆ.







