ಕಮಿಷನರೇಟ್ ವ್ಯಾಪ್ತಿ ಪೊಲೀಸರ ವರ್ಗಾವಣೆ: ಸಿಸಿಬಿಗೆ ವಿನಾಯಿತಿ

ಮಂಗಳೂರು, ನ.8: ರಾಜ್ಯದ ನಾನಾ ಪೊಲೀಸ್ ಕಮಿಷನರೇಟ್‌ಗಳಲ್ಲಿ ಐದು ವರ್ಷಗಳಿಗಿಂತ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ ಉಪ ಪೊಲೀಸ್ ಅಧೀಕ್ಷಕರು (ಡಿವೈಎಸ್ಪಿ) ಮತ್ತು ಪೊಲೀಸ್ ನಿರೀಕ್ಷಕ(ಪಿಐ)ರನ್ನು ವರ್ಗಾವಣೆಗೆ ಸರಕಾರ ಆದೇಶಿಸಿದೆ. ಆದರೆ ಸಿಸಿಬಿಯಲ್ಲಿ ಸೇವೆ ಸಲ್ಲಿಸುತ್ತಿರುವ ಡಿವೈಎಸಿ ಮತ್ತು ಪಿಐಗಳಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ.
ಡಿವೈಎಸಿ ಮತ್ತು ಪಿಐಗಳನ್ನು 2015-16ನೇ ಸಾಲಿನಿಂದ ಅನ್ವಯಿಸುವಂತೆ ಆಯಾ ಕಮಿಷನರೇಟ್‌ನಿಂದ ಹೊರಗಡೆ ವರ್ಗಾವಣೆ ಮಾಡಲು ಸರಕಾರ ಸಹಮತಿ ನೀಡಿ ಆದೇಶ ಮಾಡಿದೆ. ಆದರೆ ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಅಪರಾಧ ಹಾಗೂ ಅಪರಾಧಗಳ ಕುರಿತಂತೆ ವಿಶೇಷ ಹಾಗೂ ವೈಯಕ್ತಿಕ ಮಾಹಿತಿ ಮತ್ತು ಅನುಭವ ಹೊಂದಿರುತ್ತಾರೆ. ಇದು ಅಪರಾಧಗಳನ್ನು ಪತ್ತೆ ಹಚ್ಚಲು ಮತ್ತು ತಡೆಗಟ್ಟಲು ಸಹಕಾರಿಯಾಗುತ್ತವೆ. ಆದ್ದರಿಂದ ಈ ವಿಭಾಗದಲ್ಲಿ ಸೇವೆಯನ್ನು ಕಾಲಾವಧಿಗೆ ಸೀಮಿತಗೊಳಿಸುವುದು ಸೂಕ್ತವಲ್ಲ ಎಂದು ನಿರ್ಧರಿಸಿರುವ ಸರಕಾರ ಈ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಡಿವೈಎಸಿ ಮತ್ತು ಪಿಐಗಳಿಗೆ ವರ್ಗಾವಣೆ ಆದೇಶದಿಂದ ವಿನಾಯಿತಿ ನೀಡಿ ಆದೇಶಿಸಿದೆ ಎಂದು ಪ್ರಕಟನೆ ತಿಳಿಸಿದೆ.





