ಹನೂರು: ಸಹೋದರನಿಗೆ ಮಚ್ಚಿನಿಂದ ಹಲ್ಲೆ ನಡೆಸಿದ ಅಣ್ಣ

ಹನೂರು,ನ.8: ಕುಡಿದ ಅಮಲಿನಲ್ಲಿ ಸಹೋದರನ ಮೇಲೆ ಅಣ್ಣ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಪಟ್ಟಣದ ಮಾರುತಿ ನಗರದಲ್ಲಿ ನಡೆದಿದೆ.
ಪಟ್ಟಣದ ನಂದಾ (35) ಹಲ್ಲೆಗೊಳಗಾದ ವ್ಯಕ್ತಿ. ನಂದಾರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿ ರಾಜುವನ್ನು ಹನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಂದಾ ಗಾರೆ ಕಾರ್ಮಿಕನಾಗಿದ್ದು, ಆರೋಪಿ ರಾಜು ಬೀಗದ ರಿಪೇರಿ ಕೆಲಸ ಮಾಡುತ್ತಿದ್ದ. ಅಕ್ಕ ತಂಗಿಯರ ಮಕ್ಕಳಾದ ರಾಜು ಹಾಗೂ ನಂದ ಇಬ್ಬರೂ ಬೆಳಗ್ಗೆ ಪಾನಮತ್ತರಾಗಿ ಜೊತೆಗೆ ಮನೆಗೆ ಬಂದಿದ್ದಾರೆ ಎನ್ನಲಾಗಿದೆ. ಬಳಿಕ ಮನೆಯಲ್ಲಿ ಮಲಗಿದ್ದ ನಂದಾನನ್ನು ಆರೋಪಿ ರಾಜು ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಪತ್ನಿ ಲತಾ ಸಹಾಯಕ್ಕಾಗಿ ನೆರೆ ಹೊರೆಯವರನ್ನು ಕೂಗಿದ್ದಾರೆ.
ನಂತರ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಹನೂರು ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ, ಆರೋಪಿ ರಾಜುವನ್ನು ಬಂಧಿಸಿದ್ದಾರೆ.
Next Story





