ನ.11: ಆಯುಷ್ ಸಮಾಜ ಸೇವಾ ಚಟುವಟಿಕೆಗಳಿಗೆ ಚಾಲನೆ
ಮಂಗಳೂರು, ನ.9: ಆಯುಷ್ ಫೌಂಡೇಶನ್ ದ.ಕ. ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಸಮಾಜ ಸೇವಾ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ನ.11ರಂದು ನಗರದ ಸಂತ ಅಲೋಶಿಯಸ್ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಆಯುಷ್ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷೆ ಡಾ. ಆಶಾ ಜ್ಯೋತಿ ರೈ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು ಅಂದು ಅಪರಾಹ್ನ 2:30ರಿಂದ 4 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳು ಜರುಗಲಿವೆ. ಸಂಜೆ 4ರಿಂದ 5:15ರವರೆಗೆ ಸಭಾ ಕಾರ್ಯಕ್ರಮ ನಡೆಯದ್ದು, ಕೇಂದ್ರ ಆಯುಷ್ ಮಂತ್ರಿ ಶ್ರೀಪಾದ್ ಎಸ್ಸೊ ನಾಯ್ಕೊ ಉದ್ಘಾಟಿಸಲಿ ದ್ದಾರೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯ ಉಪಸ್ಥಿತಿಯಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಸಮಾಜ ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡುವರು. ಬೆಂಗಳೂರು ನಾರಾಯಣ ಹೃದಯಾಲಯದ ಸಂಸ್ಥಾಪಕ ಡಾ.ದೇವಿಪ್ರಸಾದ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡುವರು. ನೂತನ ಪದಾಧಿಕಾರಿಗಳ ಪದಗ್ರಹಣ ವಿಧಿಯನ್ನು ದ.ಕ.ಜಿಲ್ಲಾ ಆಯುಷ್ ಅಧಿಕಾರಿ ಮುಹಮ್ಮದ್ ಇಕ್ಬಾಲ್ ನೆರವೇರಿಸಲಿದ್ದಾರೆ ಎಂದು ಫೌಂಡೇಶನ್ ನ ನಾಮನಿರ್ದೇಶಿತ ಅಧ್ಯಕ್ಷ ಡಾ.ಗೋಪಾಲಕೃಷ್ಣ ನಾಯಕ್ ತಿಳಿಸಿದರು.
ಆಯುಷ್ ಫೌಂಡೇಶನ್ ಸಮಗ್ರವಾದ ವೈದ್ಯಕೀಯ ಪರಿಕಲ್ಪನೆಯೊಂದಿಗೆ, ಆಯುಷ್ ವೈದ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಾತ್ತಾ ಬಂದಿದೆ. ಮಹಿಳಾ ಸಬಲೀಕರಣವನ್ನು ಅರ್ಥಪೂರ್ಣವಾಗಿ ಬಿಂಬಿಸುವ ಹಾಗೂ ಸಾಮಾಜಿಕ ಜಾಗೃತಿಯನ್ನು ಉತ್ತೇಜಿಸುವಲ್ಲಿ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿದೆ ಎಂದು ಡಾ.ಗೋಪಾಲಕೃಷ್ಣ ನಾಯಕ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ನಾಮನಿರ್ದೇಶಿತ ಉಪಾಧ್ಯಕ್ಷ ಡಾ.ನೂರುಲ್ಲಾ, ಪ್ರಧಾನ ಕಾರ್ಯದರ್ಶಿ ಡಾ.ಸಂತೋಷ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಡಾ.ಪ್ರವೀಣ್ ರೈ, ಡಾ.ಸಚಿನ್ ನಡ್ಕ ಉಪಸ್ಥಿತರಿದ್ದರು.







