ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಪಾರ್ಸಲ್ ಸೇವೆಗಾಗಿ ಅಂಚೆ ಇಲಾಖೆಯಿಂದ ನೂತನ ತಂತ್ರಜ್ಞಾನ ಅಭಿವೃದ್ಧಿ

ಬೆಂಗಳೂರು, ನ.9: ಅಂಚೆ ಇಲಾಖೆ ವತಿಯಿಂದ ತಂತ್ರಜ್ಞಾನದಲ್ಲಿ ಮತ್ತಷ್ಟು ಸುಧಾರಣೆ ಕಂಡಿದ್ದು, ಗ್ರಾಹಕರ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್‌ಗಳು ಯಾವ ಹಂತದಲ್ಲಿವೆ ಹಾಗೂ ಯಾವ ಸಮಯಕ್ಕೆ ತಲುಪುತ್ತವೆ ಎಂಬುದನ್ನು ತಿಳಿಯಲು ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಸಂಸ್ಥೆ ಕೋರ್ ಸಿಸ್ಟಂ ಇಂಟಿಗ್ರೇಟರ್(ಸಿಎಸ್‌ಐ) ಎಂಬ ನೂತನ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಅಂಚೆ ಇಲಾಖೆಗೆ ನೀಡಿದ್ದು, ಇತ್ತೀಚೆಗೆ ಈ ತಂತ್ರಜ್ಞಾನದ ಬಳಕೆಗೆ ಅಧಿಕೃತ ಚಾಲನೆ ನೀಡಲಾಗಿದೆ. ಇದುವರೆಗೂ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಹಾಗೂ ಪಾರ್ಸಲ್ ಸೇವೆಗಾಗಿ ಅಂಚೆ ಸಿಬ್ಬಂದಿ ಬೇರೆ ಬೇರೆ ಅಪ್ಲಿಕೇಷನ್ ಬಳಸಬೇಕಿತ್ತು. ಅಲ್ಲದೆ, ದಿನಪೂರ್ತಿ ಮಾಹಿತಿ ಸಂಗ್ರಹ ಮಾಡಲು ಕಷ್ಟ ಪಡಬೇಕಿತ್ತು.
ಸಂಗ್ರಹ ಮಾಡಿದ ಸೇವೆಗಳ ಮಾಹಿತಿಯನ್ನು ಅಂಚೆ ಇಲಾಖೆಯ ನ್ಯಾಷನಲ್ ಸಾರ್ಟಿಂಗ್ ಹಬ್ (ಎನ್‌ಎಸ್‌ಎಚ್)(ಸ್ಪೀಡ್ ಪೋಸ್ಟ್ ವಿಭಾಗ)ನಲ್ಲಿರುವ ಸ್ಥಳೀಯ ಸರ್ವರ್‌ಗೆ ಅಳವಡಿಸಬೇಕಿತ್ತು.
ಅಲ್ಲಿಂದ ಆ ಮಾಹಿತಿ ಮೈಸೂರಿನಲ್ಲಿರುವ ಅಂಚೆ ಇಲಾಖೆಯ ತಾಂತ್ರಿಕ ಅತ್ಯುನ್ನತ ಕೇಂದ್ರ (ಸಿಇಪಿಟಿ)ಕ್ಕೆ ರವಾನೆಯಾಗುತ್ತಿತ್ತು. ಅಲ್ಲಿನ ಸಿಬ್ಬಂದಿ ಈ ಮಾಹಿತಿಯನ್ನು ಇಂಡಿಯನ್ ಪೋಸ್ಟ್ ವೆಬ್‌ಸೈಟ್‌ಗೆ ಕಳುಹಿಸಲಾಗುತ್ತಿತ್ತು. ಅನಂತರ ವೆಬ್‌ನಲ್ಲಿ ಜನರಿಗೆ ಮಾಹಿತಿ ಸಿಗುತ್ತಿತ್ತು.
ಆದರೆ, ಈಗ ಸಿಎಸ್‌ಐ ತಂತ್ರಜ್ಞಾನದ ಮೂಲಕ ಜನರು ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಹಾಗೂ ಪಾರ್ಸಲ್ ಸೇವೆ ಯಾವ ಹಂತದಲ್ಲಿದೆ ಎಂದು ಸುಲಭವಾಗಿ ತಿಳಿಸುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಮೂರು ಸೇವೆಗಳಿಗೂ ಒಂದೇ ತಂತ್ರಜ್ಞಾನ ಬಳಸಬಹುದಾಗಿದೆ. ಅಲ್ಲದೆ ಸೇವೆಗಳ ಮಾಹಿತಿಯನ್ನು ಎನ್‌ಎಸ್‌ಎಚ್ ಸಿಬ್ಬಂದಿ ಸ್ಥಳೀಯ ಸರ್ವರ್‌ಗೆ ಅಳವಡಿಸಿ ಮೈಸೂರಿನ ಸಿಇಪಿಟಿಗೆ ಕೇಂದ್ರಕ್ಕೂ ಕಳುಹಿಸುವ ಅಗತ್ಯವಿರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.







