ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ಜನಾರ್ದನ ರೆಡ್ಡಿ ಬಂಧನ ಸಾಧ್ಯತೆ

ಬೆಂಗಳೂರು, ನ.9: ಆ್ಯಂಬಿಡೆಂಟ್ ಕಂಪೆನಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಅನ್ನು 61ನೇ ಸೆಷನ್ಸ್ ನ್ಯಾಯಾಲಯ ನ.12ಕ್ಕೆ ಮುಂದೂಡಿದ್ದು, ಈ ಅವಧಿಯೊಳಗೆ ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿ ಅವರನ್ನು ಬಂಧಿಸುವ ಸಾಧ್ಯತೆ ದಟ್ಟವಾಗಿದೆ.
ಸಿಸಿಬಿ ತನಿಖಾಧಿಕಾರಿಗಳ ಮುಂದೆ ನಾಳೆಯೊಳಗೆ(ರವಿವಾರ) ವಿಚಾರಣೆಗೆ ಹಾಜರಾಗಬೇಕೆಂದು ಜನಾರ್ದನ ರೆಡ್ಡಿ ಅವರಿಗೆ ನೋಟಿಸ್ ಜಾರಿಗೊಳಿಸಿದೆ ಎನ್ನಲಾಗಿದೆ. ಇದರೊಂದಿಗೆ, ತಲೆಮರೆಸಿಕೊಂಡಿರುವ ರೆಡ್ಡಿ ಹೊರಬರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಶುಕ್ರವಾರ ರೆಡ್ಡಿ ಪರ ವಕೀಲರು ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುತ್ತಿದ್ದಂತೆ ಇದಕ್ಕೆ ಸಿಸಿಬಿ ಕೂಡ ಆಕ್ಷೇಪಣಾ ಅರ್ಜಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ನೇರ ಪಾಲನ್ನು ಹೊಂದಿದ್ದಾರೆ. ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ಮಂಜೂರು ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಬಳಿಕ ನ್ಯಾಯಾಲಯ ಈ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡುವಂತೆ ಆದೇಶ ನೀಡಿದ್ದು, ಇದರಿಂದ ಮಾಜಿ ಸಚಿವರು ಮತ್ತಷ್ಟು ಸಂಕಷ್ಟವನ್ನು ಎದುರಿಸುವಂತಾಗಿದೆ.
ಮಧ್ಯಂತರ ಜಾಮೀನು: ಇದೇ ಪ್ರಕರಣ ಸಂಬಂಧ ಮಾಜಿ ಸಚಿವ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ವಕೀಲರು ಹಿಂಪಡೆದಿದ್ದಾರೆ. ಪ್ರಕರಣ ಸಂಬಂಧ ರೆಡ್ಡಿ ಪರ ವಕೀಲ ಸಿ.ಎಚ್.ಹನುಮಂತರಾಯ ಶುಕ್ರವಾರ ಸೆಷನ್ಸ್ ಕೋರ್ಟ್‌ಗೆ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಪ್ರಕರಣದಲ್ಲಿ ಮೇಲ್ನೋಟಕ್ಕೆ ಜನಾರ್ದನ ರೆಡ್ಡಿ ಅವರ ಬಂಧನ ಭೀತಿ ಕಾಣುತ್ತಿಲ್ಲ ಎಂದು ನ್ಯಾಯಾಧೀಶರು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಕೀಲರು ಮಧ್ಯಂತರ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದಾರೆ.
ಹಲ್ಲೆ ಆರೋಪ: ಈ ಪ್ರಕರಣದಲ್ಲಿ ನಾಲ್ಕನೆ ಆರೋಪಿ ರಮೇಶ್ ಎಂಬುವರಿಗೆ ಸಿಸಿಬಿ ಪೊಲೀಸರು ಹಿಂಸೆ ಕೊಟ್ಟು ಥಳಿಸಿದ್ದಾರೆ ಎಂದು ವಕೀಲ ಸಿ.ಎಚ್.ಹನುಮಂತರಾಯ ದೂರಿದ್ದಾರೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಡಿಸಿಪಿ ಗಿರೀಶ್ ಹಾಗೂ ಎಸಿಪಿ ವೆಂಕಟೇಶ್ ಪ್ರಸನ್ನ ಅವರನ್ನು ಬದಲಾವಣೆ ಮಾಡಬೇಕು. ಇದೊಂದು ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ಜನಾರ್ದನ ರೆಡ್ಡಿಯವರ ವಿರುದ್ಧ ಸೇಡಿನ ರಾಜಕಾರಣ ನಡೆಯುತ್ತಿದೆ. ಹೀಗಾಗಿ ಅವರ ಮೇಲೆ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ರಮೇಶ್ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೇವೆ. ಅಲ್ಲದೆ, ತನಿಖಾಧಿಕಾರಿ ಬದಲಾವಣೆ ಬಗ್ಗೆ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದು, ವಿಚಾರಣೆಗೆ ಬರಲಿದೆ. ಸದ್ಯ ಮಧ್ಯಂತರ ಅರ್ಜಿ ವಾಪಸ್ಸು ಪಡೆದಿದ್ದೇವೆ. ಸೋಮವಾರ ಮುಖ್ಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ ಎಂದು ತಿಳಿಸಿದರು.
ಸಿಸಿಬಿಗೆ ಬಂದರು: ಆ್ಯಂಬಿಡೆಂಟ್ ಕಂಪೆನಿಯಿಂದ ವಂಚನೆಗೊಳಗಾದವರು ಸಿಸಿಬಿ ಕಚೇರಿಗೆ ಆಗಮಿಸಿ ಕಂಪೆನಿಗೆ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದೇವೆ. ನಮ್ಮ ಹಣ ನಮಗೆ ವಾಪಸ್ ಕೊಡಿಸಿ ಎಂದು ಸಿಸಿಬಿ ಅಧಿಕಾರಿಗಳನ್ನು ಮನವಿ ಮಾಡಿದ್ದಾರೆ. ಸುಮಾರು 40 ಕ್ಕೂ ಹೆಚ್ಚು ಜನ ಸಿಸಿಬಿ ಕಚೇರಿಗೆ ಆಗಮಿಸಿ ನಮ್ಮ ಹಣ ಕೊಡಿಸಿ ಎಂದು ಪೊಲೀಸರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.







