ಸ್ಟೀಫನ್ ಹಾಕಿಂಗ್ ರ ಗಾಲಿಕುರ್ಚಿ ಹರಾಜಾದದ್ದು ಎಷ್ಟು ಕೋಟಿ ರೂ.ಗೆ ಗೊತ್ತಾ?

ಲಂಡನ್, ನ. 9: ದಿವಂಗತ ಬ್ರಿಟಿಶ್ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಬಳಸುತ್ತಿದ್ದ ಮೋಟರೀಕೃತ ಗಾಲಿಕುರ್ಚಿಯು ಗುರುವಾರ ನಡೆದ ಹರಾಜಿನಲ್ಲಿ 3 ಲಕ್ಷ ಪೌಂಡ್ (ಸುಮಾರು 2.85 ಕೋಟಿ ರೂಪಾಯಿ)ಗೆ ಮಾರಾಟವಾಗಿದೆ. ಅದೇ ವೇಳೆ, ಅದೇ ಹರಾಜಿನಲ್ಲಿ ಅವರ ಸೈದ್ಧಾಂತಿಕ ಪ್ರಬಂಧವೊಂದು ಅದಕ್ಕಿಂತ ದುಪ್ಪಟ್ಟು ಬೆಲೆಗೆ ಮಾರಾಟವಾಗಿದೆ.
ವಿಶ್ವದ ಉಗಮಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ಖ್ಯಾತರಾಗಿದ್ದ ಸ್ಟೀಫನ್ ಹಾಕಿಂಗ್ ಈ ವರ್ಷದ ಮಾರ್ಚ್‌ನಲ್ಲಿ 76ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವುದನ್ನು ಸ್ಮರಿಸಬಹುದಾಗಿದೆ. ‘ಮೋಟರ್ ನ್ಯೂರಾನ್ ಕಾಯಿಲೆ’ಯಿಂದ ಬಳಲುತ್ತಿದ್ದ ಅವರು ತನ್ನ ಜೀವನದ ಹೆಚ್ಚಿನ ಸಮಯವನ್ನು ಗಾಲಿಕುರ್ಚಿಯಲ್ಲೇ ಕಳೆದಿದ್ದರು.
ಪ್ರಬಂಧಗಳು, ಪದಕಗಳು, ಪ್ರಶಸ್ತಿಗಳು ಮತ್ತು ‘ಬ್ರೀಫ್ ಹಿಸ್ಟರಿ ಆಫ್ ಟೈಮ್’ ಎಂಬ ಹೆಸರಿನ ಅವರ ಪುಸ್ತಕ ಸೇರಿದಂತೆ ಅವರಿಗೆ ಸೇರಿದ ಕೆಲವು ವಸ್ತುಗಳನ್ನು ಗುರುವಾರ ಹರಾಜು ಹಾಕಲಾಯಿತು. ಇದೇ ಸಂದರ್ಭದಲ್ಲಿ, ಐಸಾಕ್ ನ್ಯೂಟನ್, ಚಾರ್ಲ್ಸ್ ಡಾರ್ವಿನ್ ಮತ್ತು ಆಲ್ಬರ್ಟ್ ಐನ್‌ಸ್ಟೀನ್‌ಗೆ ಸೇರಿದ ಪತ್ರಗಳು ಮತ್ತು ಹಸ್ತಪ್ರತಿಗಳನ್ನೂ ಮಾರಾಟಕ್ಕೆ ಇಡಲಾಯಿತು.
ಹಾಕಿಂಗ್‌ರ 1965ರ 117 ಪುಟದ ಸೈದ್ಧಾಂತಿಕ ಪ್ರಬಂಧ ‘ಪ್ರಾಪರ್ಟೀಸ್ ಆಫ್ ಎಕ್ಸ್‌ಪಾಂಡಿಂಗ್ ಯುನಿವರ್ಸ್’ 5,84,750 ಪೌಂಡ್ (ಸುಮಾರು 5.52 ಕೋಟಿ ರೂಪಾಯಿ)ಗೆ ಹರಾಜಾಯಿತು.
ಪದಕಗಳು ಮತ್ತು ಪ್ರಶಸ್ತಿಗಳು 2,96,750 ಪೌಂಡ್ (ಸುಮಾರು 2.80 ಕೋಟಿ ರೂಪಾಯಿ)ಗೆ ಮಾರಾಟವಾದವು.







