ನ.11: ಉಡುಪಿಯಲ್ಲಿ ಕನ್ನಡ ಕಲಾ ಪ್ರತಿಭೋತ್ಸವ ; 9 ಮಂದಿಗೆ ಪ್ರಶಸ್ತಿ ಪ್ರದಾನ
ಉಡುಪಿ, ನ.9: ನಗರದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನ.11ರ ಅಪರಾಹ್ನ 2 ರಿಂದ ನಡೆಯುವ ಕನ್ನಡ ಕಲಾ ಪ್ರತಿಭೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 9 ಮಂದಿಗೆ ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ ಹಾಗೂ ಸಾಧಕ ಮಕ್ಕಳಿಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಗುಣಕರ ಡಿ.ಶೆಟ್ಟಿ-ನ್ಯಾಯಾಂಗ, ಶೇಖರ ಅಜೆಕಾರು- ಪತ್ರಿಕೋದ್ಯಮ, ಚಿತ್ತರಂಜನ್ ಬೋಳಾರ್-ಸಹಕಾರ, ಡಾ.ಎಸ್.ಜಿ. ಹಿರೇಮಠ-ಶಿಕ್ಷಣ, ದೇವಿಪ್ರಸಾದ್ ಕಾನತ್ತೂರ್- ಪಶು ಸಂಗೋಪನೆ, ಬಿ.ಕೆ. ಮಾಧವರಾವ್-ಚಿತ್ರಕಲೆ, ಹರ್ಷಾ ಕರುಣಾಕರ ಸೇರ್ಕಜೆ- ಸಮಾಜ ಸೇವೆ ಮತ್ತು ಧಾರ್ಮಿಕ, ಮೀನಾಕ್ಷಿ ಸಾಂತಪ್ಪ ಗೌಡ ವಾಲ್ತಾಜೆ- ಮಕ್ಕಳ ಕಲ್ಯಾಣ, ಎನ್.ಎಸ್.ರಾಕೇಶ್- ಆಡಳಿತ ಇವರು ಈ ವರ್ಷದ ಬಸವಶ್ರೀ ಗೌರವಕ್ಕೆ ಪಾತ್ರರಾಗಲಿದ್ದಾರೆ ಎಂದು ಅದು ತಿಳಿಸಿದೆ.
ಬೆಂಗಳೂರಿನ ಜ್ಞಾನಮಂದಾರ ಅಕಾಡೆಮಿ ಹಾಗೂ ಮುಂಬಯಿ ರಾಧಾಕೃಷ್ಣ ನೃತ್ಯ ಅಕಾಡೆಮಿ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಮುಂಬಯಿಯ ಎರಡು ತಂಡಗಳ ನೂರರಷ್ಟು ಮಕ್ಕಳು ಪ್ರತಿಭಾ ಪ್ರದರ್ಶನ ನೀಡುವರು. ಕಾರ್ಯಕ್ರಮದಲ್ಲಿ ಕಸಾಪದ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರನ್ನು 75ರ ಸಂಭ್ರಮಕ್ಕಾಗಿ ‘ಶಿಲೆಯ ಹೂ’ ಕೃತಿಯೊಂದಿಗೆ ಸನ್ಮಾನಿಸಲಾಗುವುದು.
ಮುಂಬಯಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಂಸದೆ ಶೋಬಾ ಕರಂದ್ಲಾಜೆ, ಡಾ.ಸುಧೀರ್ ಪೈ ಕೆ.ಎಲ್, ಡಾ. ಮೋಹನ್ ಆಳ್ವ, ಮಹೇಶ್ ಹೆಗ್ಡೆ ಪುಣೆ, ಎ.ಸದಾನಂದ ಶೆಟ್ಟಿ, ಮೋರ್ಲಾ ರತ್ನಾಕರ ಶೆಟ್ಟಿ, ಡಾ.ಮಂಜುನಾಥ ಎಸ್. ರೇವಣ್‌ಕರ್, ಜ್ಞಾನ ಮಂದಾರ ಅಕಾಡೆಮಿಯ ಸಂಸ್ಥಾಪಕ ಎಚ್.ಜಿ ಸೋಮಶೇಖರ ಮೊದಲಾದವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.







