ವರದಿಗಾರನ ವಿರುದ್ಧದ ಆರೋಪ ಸಾಬೀತಿಗೆ ತಿರುಚಿದ ವೀಡಿಯೊ ಬಿಡುಗಡೆ ಮಾಡಿದ ಶ್ವೇತಭವನ!
ನ್ಯೂಯಾರ್ಕ್, ನ. 9: ಸಿಎನ್‌ಎನ್ ವರದಿಗಾರ ಜಿಮ್ ಅಕೋಸ್ಟಗೆ ಶ್ವೇತಭವನ ಪ್ರವೇಶ ನಿರಾಕರಿಸಿ ಟ್ರಂಪ್ ಆಡಳಿತ ಹೊರಡಿಸಿರುವ ಆದೇಶವನ್ನು ಸಮರ್ಥಿಸಲು ಆಡಳಿತವು ವೀಡಿಯೊವೊಂದನ್ನು ಬಿಡುಗಡೆ ಮಾಡಿದೆ. ಶ್ವೇತಭವನದ ಮಹಿಳಾ ಸಿಬ್ಬಂದಿ ಜೊತೆ ವ್ಯವಹರಿಸುವಾಗ ಅಕೋಸ್ಟ ಆಕ್ರಮಣಶೀಲರಾಗಿ ವರ್ತಿಸುವುದನ್ನು ವೀಡಿಯೊ ತೋರಿಸುತ್ತದೆ. ಆದರೆ, ವಾಸ್ತವವಾಗಿ ಅವರು ವರ್ತಿಸಿರುವುದಕ್ಕಿಂತಲೂ ಹೆಚ್ಚು ಆಕ್ರಮಣಕಾರಿಯಾಗಿ ಅವರು ವರ್ತಿಸಿರುವುದನ್ನು ವೀಡಿಯೊ ತೋರಿಸುತ್ತಿದ್ದು, ಶ್ವೇತಭವನವು ವೀಡಿಯೊವನ್ನು ತಿರುಚಿರುವ ಸಾಧ್ಯತೆಗಳಿವೆ ಎಂದು ಸ್ವತಂತ್ರ ಪರಿಣತರೊಬ್ಬರು ಹೇಳಿದ್ದಾರೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಈ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಅಕೋಸ್ಟ ಟ್ರಂಪ್‌ಗೆ ಪ್ರಶ್ನೆಯೊಂದನ್ನು ಕೇಳುವಾಗ ಶ್ವೇತಭವನದ ಮಹಿಳಾ ಸಿಬ್ಬಂದಿ ಅವರಿಂದ ಮೈಕ್ರೋಫೋನನ್ನು ಎಳೆದುಕೊಳ್ಳುವುದನ್ನು ವೀಡಿಯೊ ತೋರಿಸುತ್ತದೆ.
ಆದರೆ, ಇದೇ ಘಟನೆಗೆ ಸಂಬಂಧಿಸಿದ ಅಸೋಸಿಯೇಟಡ್ ಪ್ರೆಸ್ ವೀಡಿಯೊ ಜೊತೆಗೆ ಈ ವೀಡಿಯೊವನ್ನು ತಾಳೆ ಹಾಕಿದಾಗ, ಸ್ಯಾಂಡರ್ಸ್ ಬಿಡುಗಡೆ ಮಾಡಿದ ವೀಡಿಯೊವನ್ನು ತಿರುಚಿರುವುದು ಪತ್ತೆಯಾಗಿದೆ.
ಅಕೋಸ್ಟರ ಕೈ ಶ್ವೇತಭವನದ ಮಹಿಳಾ ಸಿಬ್ಬಂದಿಯ ಕೈಗೆ ತಾಗುವ ಸಂದರ್ಭದಲ್ಲಿ, ಅಕೋಸ್ಟರ ಕೈ ಚಲನೆಯ ವೇಗವನ್ನು ಹೆಚ್ಚಿಸಲು ವೀಡಿಯೊವನ್ನು ತಿರುಚಲಾಗಿರುವಂತೆ ಕಂಡುಬರುತ್ತದೆ ಎಂದು ಪರಿಣತ ಅಬ್ಬಾ ಶಪಿರೊ ಹೇಳುತ್ತಾರೆ.
ಅದಕ್ಕೂ ಮುನ್ನ, ಟ್ವೀಟ್ ಮಾಡಲಾದ ವೀಡಿಯೊ, ಅಸೋಸಿಯೇಟಡ್ ಪ್ರೆಸ್‌ನ ವೀಡಿಯೊದಷ್ಟೆ ಉದ್ದವಿರುವುದನ್ನು ಖಾತರಿಪಡಿಸಲು ವೀಡಿಯೊದ ಕೆಲವು ಫ್ರೇಮ್‌ಗಳ ಚಲನೆಯನ್ನು ನಿಧಾನಗೊಳಿಸಿರುವುದನ್ನೂ ಅವರು ಪತ್ತೆಹಚ್ಚಿದ್ದಾರೆ.