‘ಬ್ಯಾಕ್‌ವರ್ಡ್ ಕ್ಲಾಸಸ್ ಆ್ಯಂಡ್ ಮೈನಾರಿಟಿ ಔಟ್‌ಲೈನ್ಸ್’ ಪುಸ್ತಕ ಬಿಡುಗಡೆ

ಮಂಗಳೂರು, ನ.9: ಅಹಿಂದ ಜನಚಳವಳಿ ಮಂಗಳೂರು ಮತ್ತು ಅಖಿಲ ಭಾರತ ಬ್ಯಾರಿ ಪರಿಷತ್‌ಗಳ ಜಂಟಿ ಆಶ್ರಯದಲ್ಲಿ ನಗರದ ಜಿಲಾಧಿಕಾರಿ ಕಚೇರಿ ಬಳಿಯ ಕಂದಾಯಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಬ್ಯಾಕ್‌ವರ್ಡ್ ಕ್ಲಾಸಸ್ ಆ್ಯಂಡ್ ಮೈನಾರಿಟಿ ಔಟ್‌ಲೈನ್ಸ್’ ಪುಸ್ತಕವನ್ನು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ವಿದ್ಯಾರ್ಥಿಗಳಿಗೆ ಅತ್ಯಮೂಲ್ಯವಾದ ಮಾಹಿತಿ ನೀಡುವ ಪುಸ್ತಕ ರಚನೆಯಾಗಿದೆ. ಕೆಲವು ಬಾರಿ ಸರಕಾರದ ಮಾಹಿತಿ ಜನರ ಬಳಿ ತಲುಪುವುದಿಲ್ಲ. ಸರಕಾರದಿಂದ ವಿದ್ಯಾಭ್ಯಾಸಕ್ಕಾಗಿ ಏನೆಲ್ಲ ಯೋಜನೆ ಇದೆ ಎಂಬ ಮಾಹಿತಿ ಈ ಪುಸ್ತಕದಲ್ಲಿದೆ. ಈ ಪುಸ್ತಕ ಬಹಳಷ್ಟು ಜನರಿಗೆ ಸದುಪಯೋಗ ಆಗಲಿ ಎಂದು ಹಾರೈಸಿದರು.
ಬ್ಯಾರಿ ಸಾಹಿತ್ಯ ಅಕಾಡಮಿಯ ನಿಕಟಪೂರ್ವ ಅಧ್ಯಕ್ಷ ಮಹಮ್ಮದ್ ಹನೀಫ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಿಗುವ ಸ್ಕಾಲರ್‌ಶಿಪ್‌ಗಳ ಮಾಹಿತಿ ಹೊಂದಿರುವ ಯೂಸುಫ್ ವಕ್ತಾರ್ ರಚಿತ ‘ಬ್ಯಾಕ್‌ವರ್ಡ್ ಕ್ಲಾಸಸ್ ಆ್ಯಂಡ್ ಮೈನಾರಿಟಿ ಔಟ್‌ಲೈನ್ಸ್’ ಪುಸ್ತಕ ಬಹಳಷ್ಟು ವಿದ್ಯಾರ್ಥಿಗಳಿಗೆ ಸದುಪಯೋಗ ಆಗಲಿದೆ ಎಂದರು.
ಸ್ಕಾಲರ್‌ಶಿಪ್‌ಗೆ ಬರುವ ಅರ್ಜಿ ಕಡಿಮೆಯಾದರೆ ಸರಕಾರ ಆಯಾ ಯೋಜನೆಗೆ ಮಂಜೂರು ಮಾಡುವ ಹಣದ ಮೊತ್ತ ಕಡಿಮೆಯಾಗುತ್ತದೆ. ವಿವಿಧ ಯೋಜನೆಗಳಲ್ಲಿ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಎಲ್ಲರೂ ಮುಂದಾಗಬೇಕು ಎಂದರು.
ಈ ಸಂದರ್ಭ ಕೆಎಂಡಿಸಿ ಜಿಲ್ಲಾ ವ್ಯವಸ್ಥಾಪಕ ಶ್ರೀಧರ್ ಭಂಡಾರಿ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಉಸ್ಮಾನ್, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಹಿಂದ ಜನ ಚಳವಳಿಯ ಗೌರವಾಧ್ಯಕ್ಷ ನವೀನ್ ಚಂದ್ರ ಸುವರ್ಣ ವಹಿಸಿದ್ದರು. ಅಖಿಲ ಭಾರತ ಬ್ಯಾರಿ ಪರಿಷತ್‌ನ ಅಧ್ಯಕ್ಷ ಜೆ.ಹುಸೈನ್ ಜೋಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಹಿಂದ ಜನ ಚಳವಳಿಯ ಅಧ್ಯಕ್ಷ ವಾಸುದೇವ ಬೋಳೂರು, ಕಾರ್ಯಾಧ್ಯಕ್ಷ ಪದ್ಮನಾಭ ನರಿಂಗಾನ, ಸುಳ್ಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್ ಸುಳ್ಯ, ರೀಟಾ ನೋರಾನ್ಹಾ, ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ವೇದಿಕೆಯ ಜಿಲ್ಲಾಧ್ಯಕ್ಷ ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಮುಹಮ್ಮದ್ ಮುಕ್ಕಚ್ಚೇರಿ, ಮುಹಮ್ಮದ್ ಬಜಾಲ್, ಮೊದಲಾದವರು ಉಪಸ್ಥಿತರಿದ್ದರು.
ಅಹಿಂದ ಮತ್ತು ಎಬಿಬಿಪಿಯ ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್ ಸ್ವಾಗತಿಸಿದರು. ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.







