ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದವರ ಬಂಧನಕ್ಕೆ ಒತ್ತಾಯ
ಕೊಡ್ಲಿಪೇಟೆ, ನ.9: ಪ್ರವಾದಿ ಮುಹಮ್ಮದ್(ಸ)ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕೋಮುಭಾವನೆಗೆ ಧಕ್ಕೆ ತಂದವರನ್ನು ಬಂಧಿಸಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್‌ಗೆ ಕೊಡ್ಲಿಪೇಟೆಯ ಜಾಮಿಯಾ ಮಸೀದಿ, ಮಸ್ಜಿದುನ್ ನೂರ್, ಟಿಪ್ಪು ಯುವಕ ಸಂಘ, ಎಚ್‌ಕೆಜಿಎನ್ ಕಮಿಟಿ ಹಾಗೂ ನೂರ್ ಯೂತ್ ಕಮಿಟಿ ಒತ್ತಾಯಿಸಿವೆ.
ನ.6ರಂದು ಪ್ರಕಟಗೊಂಡ ಕಾವೇರಿ ಟೈಮ್ಸ್ ದಿನಪತ್ರಿಕೆಯಲ್ಲಿ ನ.5ರಂದು ಗೋಣಿಕೊಪ್ಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪತ್ರಿಕಾ ಅಂಕಣಕಾರ ಸಂತೋಷ್ ತಮ್ಮಯ್ಯ, ಪ್ರವಾದಿ ಹಾಗೂ ಇಸ್ಲಾಮ್ ಧರ್ಮವನ್ನು ಅವಹೇಳನಕಾರಿಯಾಗಿ ಬಿಂಬಿಸಿರುವ ಮತ್ತು ಪ್ರವಾದಿ ಮುಹಮ್ಮದ್‌ರನ್ನು ಭಯೋತ್ಪಾದನೆಗೆ ಹೋಲಿಸಿದ್ದಾರೆ ಎಂದು ಕೊಡ್ಲಿಪೇಟೆ ಹೋಬಳಿಯ ಮುಸ್ಲಿಮ್ ಬಾಂಧವರು ಹಾಗೂ ಸಾರ್ವಜನಿಕರು, ಸಂಘ ಸಂಸ್ಥೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಶತಮಾನಗಳ ಹಿಂದೆ ಅರಬ್ ನೆಲದಲ್ಲಿ ಪ್ರವಾದಿಯೋರ್ವ ಧರ್ಮದ ಹೆಸರಿನಲ್ಲಿ ಹುಟ್ಟುಹಾಕಿದ ಅಸಹನೆಯ ಸಿದ್ಧಾಂತವೇ ಟಿಪ್ಪುವಿನಂತಹ ಮತಾಂಧ, ಕ್ರೂರಿ ಹುಟ್ಟಿಕೊಳ್ಳಲು ಕಾರಣ’ವೆಂದು ಸಂತೋಷ್ ತಮ್ಮಯ್ಯ ಮಾತನಾಡಿರುವ ಘಟನೆ ನಡೆದಿದೆ. ವಿನಾಕಾರಣ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸದಲ್ಲಿ ತೊಡಗಿರುವ ಶಾಂತಿ ಕದಡುವ ದುರುದ್ದೇಶದಿಂದಲೇ ಪತ್ರಿಕಾ ಅಂಕಣಕಾರ ಸಂತೋಷ್ ತಮ್ಮಯ್ಯ ಈ ರೀತಿ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಸರಕಾರ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೆ, ವಿನಾಕಾರಣ ಇಂತಹ ಸನ್ನಿವೇಶದಲ್ಲಿ ಅನ್ಯಧರ್ಮಿಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವವರ ವಿರುದ್ಧ ಐಪಿಸಿ ಸೆಕ್ಷನ್ 295 ಎ ಪ್ರಕಾರ ಅಪರಾಧವಾಗಿರುತ್ತದೆ. ಸಂತೋಷ್ ತಮ್ಮಯ್ಯ ಹಾಗೂ ವರದಿಯನ್ನು ಪ್ರಚೋದನಕಾರಿಯಾಗಿ ಪ್ರಕಟಿಸಿ ಇಸ್ಲಾಮ್ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪತ್ರಿಕೆಯನ್ನು ರದ್ದುಗೊಳಿಸಬೇಕಾಗಿ ಹಾಗೂ ಈತನೊಂದಿಗೆ ಈ ಸಭೆಯಲ್ಲಿ ಮಾತನಾಡಿದ ರಾಬರ್ಟ್ ರೋಜಾರಿಯೋ ಹಾಗೂ ಅಡ್ಡಂಡ ಕಾರ್ಯಪ್ಪ, ಸುಧಾಕರ್ ಹೊಸಳ್ಳಿ ಹಾಗೂ ಬಾಚರಣೆಯಂಡ ಅಪ್ಪಣ್ಣರನ್ನು ಕೂಡಲೇ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕು ಎಂದು ಸಂಘ ಸಂಸ್ಥೆಗಳ ಮುಖಂಡರು ಮನವಿ ಮಾಡಿದ್ದಾರೆ.







