ಮಾಸ್ಕೋ ಮಾತುಕತೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆ ಪ್ರಶ್ನಿಸಿದ ಉಮರ್ ಅಬ್ದುಲ್ಲಾ

ಶ್ರೀನಗರ,ನ.9: ಜಮ್ಮು-ಕಾಶ್ಮೀರದಲ್ಲಿ ಪಾಲುದಾರರೊಂದಿಗೆ ಯಾವುದೇ ಮಾತುಕತೆಗಳನ್ನು ನಡೆಸದ ಕೇಂದ್ರವು ಮಾಸ್ಕೋದಲ್ಲಿ ತಾಲಿಬಾನ್ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಅಫ್ಘಾನಿಸ್ತಾನ ಕುರಿತು ಮಾತುಕತೆಯಲ್ಲಿ ಪಾಲ್ಗೊಂಡಿರುವುದನ್ನು ನ್ಯಾಷನಲ್ ಕಾನ್‌ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಅವರು ಪ್ರಶ್ನಿಸಿದ್ದಾರೆ.
ತಾಲಿಬಾನ್ ಒಳಗೊಂಡಿರುವ ಮಾತುಕತೆಯಲ್ಲಿ ‘ಅನಧಿಕೃತ’ ಪಾಲ್ಗೊಳ್ಳುವಿಕೆಯು ಮೋದಿ ಸರಕಾರಕ್ಕೆ ಒಪ್ಪಿತವಾಗಿದ್ದರೆ ಜಮ್ಮು-ಕಾಶ್ಮೀರದಲ್ಲಿ ಮುಖ್ಯವಾಹಿನಿಯೇತರ ಪಾಲುದಾರರೊಂದಿಗೆ ಅನಧಿಕೃತ ಮಾತುಕತೆ ಏಕೆ ಒಪ್ಪಿತವಲ್ಲ?, ಮುಕ್ಕಾಗಿರುವ ಜಮ್ಮು-ಕಾಶ್ಮೀರದ ಸ್ವಾಯತ್ತತೆ ಮತ್ತು ಅದರ ಮರುಸ್ಥಾಪನೆಯನ್ನು ಕೇಂದ್ರವಾಗಿಸಿಕೊಂಡು ಅನಧಿಕೃತ ಮಾತುಕತೆಯನ್ನೇಕೆ ನಡೆಸಬಾರದು ಎಂದು ಉಮರ್ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.
ರಷ್ಯಾ ನ.9ರಂದು ಮಾಸ್ಕೋದಲ್ಲಿ ಆಯೋಜಿಸಿರುವ ಮಾತುಕತೆಗಳಲ್ಲಿ ತಾನು ‘ಅನಧಿಕೃತ ಮಟ್ಟ’ದಲ್ಲಿ ಭಾಗವಹಿಸುವುದಾಗಿ ಭಾರತವು ಗುರುವಾರ ಹೇಳಿತ್ತು.
Next Story





