ಟಿಪ್ಪು ಜಯಂತಿ ಆಚರಣೆ ತಡೆಗೆ ಹೈಕೋರ್ಟ್ ನಕಾರ

ಬೆಂಗಳೂರು, ನ.9: ಟಿಪ್ಪುಸುಲ್ತಾನ್ ಜಯಂತಿ ಆಚರಣೆಗೆ ತಡೆ ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿ ಆದೇಶ ಹೊರಡಿಸಿದೆ. ಈ ಮೂಲಕ ಸರಕಾರ ಟಿಪ್ಪು ಸುಲ್ತಾನ್ ಜಯಂತಿಯನ್ನು ತಾನಂದುಕೊಂಡಂತೆ ಆಚರಿಸಬಹುದಾಗಿದೆ.
ಟಿಪ್ಪುಜಯಂತಿಗೆ ತಡೆ ನೀಡುವಂತೆ ಕೊಡಗು ಜಿಲ್ಲೆಯ ಮಂಜುನಾಥ ಎಂಬುವವರು ವಕೀಲರಾದ ಪವನ್ ಚಂದ್ರಶೆಟ್ಟಿ ಮೂಲಕ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರು, ಕೋಪಗೊಂಡು ಟಿಪ್ಪುಜಯಂತಿ ಎರಡು ದಿನ ಮೊದಲು ಅರ್ಜಿ ಸಲ್ಲಿಸುತ್ತೀರಿ, ಆದರೆ ಅರ್ಜಿಯಲ್ಲಿ ಸರಕಾರದ ನಿರ್ಧಾರವನ್ನೇ ಪ್ರಶ್ನಿಸಿಲ್ಲ ಎಂದು ಗರಂ ಆಗಿದ್ದಾರೆ.
ಅಲ್ಲದೆ, 2016ರಲ್ಲೇ ಸರಕಾರಕ್ಕೆ ಮನವಿ ಸಲ್ಲಿಸಲು ಸೂಚಿಸಿದ್ದೆವು, ಸರಕಾರ ನ.8, 2016ರಂದು ನಿಮ್ಮ ಮನವಿ ತಿರಸ್ಕರಿಸಿದೆ. ಆದರೆ ನೀವು ಸರಕಾರದ ನಿರ್ಧಾರವನ್ನೇ ಈವರೆಗೂ ಪ್ರಶ್ನಿಸಿಲ್ಲ ಎಂದು ಅರ್ಜಿದಾರರ ಕ್ರಮಕ್ಕೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ನಂತರ ಅರ್ಜಿದಾರರ ವಕೀಲರು ಟಿಪ್ಪು ಜಯಂತಿಗೆ ಮಧ್ಯಂತರ ತಡೆ ನೀಡಲು ಮನವಿ ಮಾಡಿದರು. ಇನ್ನು ನ್ಯಾಯಾಲಯ ನೀವು ನಿಮ್ಮ ಮಿತಿ ಮೀರುತ್ತಿದ್ದೀರಿ ಎಂದು ಹೇಳುವ ಮೂಲಕ ವಕೀಲರ ವಾದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ ಮೂರು ವಾರಗಳ ಕಾಲ ವಿಚಾರಣೆಯನ್ನು ಮುಂದೂಡಿತು. ಇದರಿಂದ ನ.10ರಂದು ನಡೆಯುವ ಟಿಪ್ಪುಜಯಂತಿ ಆಚರಣೆಗೆ ಯಾವುದೇ ಅಡೆತಡೆ ಇಲ್ಲ.







