ತಂದೆಯ ಆಸ್ತಿ ಕಬಳಿಸಿದ ಮಕ್ಕಳ ವಿರುದ್ಧ ಕಿಡಿಕಾರಿದ ಹೈಕೋರ್ಟ್

ಬೆಂಗಳೂರು, ನ.9: ತಂದೆಯ ಆಸ್ತಿಯನ್ನು ಕಬಳಿಸಿ ಬೀದಿಗೆ ತಳ್ಳಿದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಕ್ಕಳ ಮೇಲೆ ಕೆಂಡ ಕಾರಿ, ಮಕ್ಕಳಿಂದಲೇ ಕಿರುಕುಳ ಅನುಭವಿಸುತ್ತಿರುವ ತಂದೆಯ ಅಸಹಾಯಕತೆಯ ಬಗ್ಗೆ ಮರುಕಪಟ್ಟಿತು.
ತನ್ನ ಮಕ್ಕಳಿಂದ ನ್ಯಾಯ ಕೊಡಿಸಬೇಕು ಹಾಗೂ ರಕ್ಷಣೆ ಒದಗಿಸಬೇಕೆಂದು ಕೋರಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಸಿ.ಎ.ಕೆರೆ ಹೋಬಳಿ ಅಣ್ಣೂರು ಗ್ರಾಮದ 71 ವರ್ಷದ ವೃದ್ಧ ಪಟೇಲ್ ಶಿವಲಿಂಗೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ನ್ಯಾಯಪೀಠ, ತಂದೆಯನ್ನು ಬೀದಿಗೆ ತಳ್ಳಿದ ಮಕ್ಕಳ ವಿರುದ್ಧ ಹರಿಹಾಯ್ದರಲ್ಲದೆ, ಉಪವಿಭಾಗಾಧಿಕಾರಿ ಆದೇಶ ಪಾಲಿಸದ ಪೊಲೀಸರ ಮೇಲೆ ಕಿಡಿಕಾರಿದರು. ಪ್ರತಿವಾದಿಗಳ ಪರ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಅಂತೆಯೇ ವೃದ್ಧ ತಂದೆಯ ಅಸಹಾಯಕತೆಯನ್ನು ಕಂಡು ಮರುಕಪಟ್ಟರು.
ಇದೇ ವೇಳೆ ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ಶಿವಲಿಂಗೇಗೌಡರು ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಅನುಭವಿಸಲು ಮತ್ತು ಮಕ್ಕಳು ಅವರನ್ನು ಪಾಲನೆ, ಪೋಷಣೆ ಮಾಡುವ ಬಗ್ಗೆ ಮಂಡ್ಯ ಉಪವಿಭಾಗಾಧಿಕಾರಿಗಳು 2017ರ ನ.14ರಂದು ನೀಡಿದ್ದ ಆದೇಶ ಪಾಲನೆ ಮಾಡಿ, ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈ ಪ್ರಕರಣದಲ್ಲಿ ನಿರ್ಲಕ್ಷ ವಹಿಸಿದ ಕೆ.ಎಂ. ದೊಡ್ಡಿ ಪೊಲೀಸ್ ಠಾಣೆಯ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿ ವಿಚಾರಣೆಯನ್ನು ನ.19ಕ್ಕೆ ಮುಂದೂಡಿದರು.
ವಾದ-ಪ್ರತಿ ವಾದ ಆಲಿಸಿದ ಬಳಿಕ ನ್ಯಾಯಮೂರ್ತಿಗಳು ತೀರ್ಪು ಬರೆಸುತ್ತಿದ್ದರು. ಈ ವೇಳೆ ಶಿವಲಿಂಗೇಗೌಡರ ಹಿರಿಯ ಮಗ ರಾಮಕೃಷ್ಣ, ‘ಸ್ವಾಮಿ ನಮ್ದೂ ಸ್ವಲ್ಪ ಕೇಳಿ, ನಾವೂ ಹೇಳ್ತೀವಿ’ ಎಂದು ಏರಿದ ಧ್ವನಿಯಲ್ಲಿ ಕೇಳಿದ. ಇದರಿಂದ ಕೋಪಗೊಂಡ ನ್ಯಾಯಮೂರ್ತಿಗಳು ಕೋರ್ಟ್ ಕಲಾಪಕ್ಕೆ ಅಡ್ಡಿಪಡಿಸಿದ, ನ್ಯಾಯಾಲಯಕ್ಕೆ ಅಗೌರವ ತೋರಿದ ಕಾರಣಕ್ಕೆ ಆತನನ್ನು ಬಂಧಿಸಿ ಜೈಲಿಗೆ ಕರೆದುಕೊಂಡು ಹೋಗುವಂತೆ ಕೋರ್ಟ್‌ನಲ್ಲಿದ್ದ ಪೊಲೀಸರಿಗೆ ಸೂಚನೆ ನೀಡಿದರು.







