ಪೋಳ್ಯ ಲಕ್ಷ್ಮೀ ವೆಂಕಟರಮಣ ಮಠದಿಂದ ವಿಗ್ರಹ, ಬೆಳ್ಳಿ ಸಾಮಗ್ರಿ ಕಳವು

ಪುತ್ತೂರು, ನ. 9: ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಿಂದ ಪುರಾತನ ಕಾಲದ ಅಪರೂಪದ ಗಣಪತಿ ವಿಗ್ರಹಗಳ ಸಹಿತ 8 ವಿಗ್ರಹಗಳು, 2 ಕೆಜಿ ತೂಕದ ಬೆಳ್ಳಿಯ ಪ್ರಭಾವಳಿ ಸಹಿತ ಸುಮಾರು ನಾಲ್ಕು ಮುಕ್ಕಾಲು ಕೆಜಿಯಷ್ಟು ತೂಕದ ಬೆಳ್ಳಿಯ ಸಾಮಗ್ರಿಗಳು ಸೇರಿದಂತೆ ಅಪಾರ ಮೌಲ್ಯದ ಸೊತ್ತು ಕಳವಾದ ಘಟನೆ ಬೆಳಕಿಗೆ ಬಂದಿದೆ.
ದೇವಳದ ಗರ್ಭಗುಡಿಯಲ್ಲಿದ್ದ ಪುರಾತನ ಕಾಲದ ಗಣಪತಿ ವಿಗ್ರಹ ಸಹಿತ ದೇವಳದಲ್ಲಿದ್ದ 8 ವಿಗ್ರಹಗಳು, ಬೆಳ್ಳಿಯ ಕವಚ ಹೊಂದಿರುವ ಬಲಮುರಿ ತೀರ್ಥ ಶಂಖ, ದೇವರ ಪ್ರಭಾವಳಿ, ಬೆಳ್ಳಿಯ ಶಡಗೋಪ ಸಹಿತ 4.690 ಕೆ.ಜಿಯಷ್ಟು ಬೆಳ್ಳಿಯ ಸಾಮಗ್ರಿಗಳು ಕಳವಾಗಿದೆ. ಗರ್ಭಗುಡಿಯಲ್ಲಿದ್ದ ಭೂದೇವಿ, ಶ್ರೀದೇವಿ ಹಾಗೂ ವೆಂಕಟ್ರಮಣ ವಿಗ್ರಹದ ಬೆಳ್ಳಿ ಕವಚಗಳನ್ನು ಕಿತ್ತು ತೆಗೆದಿರುವ ದುಷ್ಕರ್ಮಿಗಳು ಈ ಮೂರು ವಿಗ್ರಹಗಳನ್ನು ದೇವಳದ ಒಳಾಂಗಣದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಗರ್ಭಗುಡಿಯಲ್ಲಿದ್ದ 650 ಗ್ರಾಂ ಬೆಳ್ಳಿ ಮತ್ತು 1 ಗ್ರಾಂ ಚಿನ್ನ ಹೊಂದಿರುವ ಭೂದೇವಿ ಮತ್ತು ಶ್ರೀದೇವಿ ವಿಗ್ರಹ, ವೆಂಕಟರಮಣ ದೇವರ 3 ಬೆಳ್ಳಿ ಕವಚ, ವೆಂಕಟ್ರಮಣ ದೇವರ ಒಂದು ಸಣ್ಣ ವಿಗ್ರಹ, 35 ಗ್ರಾಂ ತೂಕದ ಬೆಳ್ಳಿ ಕವಚದ ಉತ್ಸವ ಮೂರ್ತಿ, ಪಂಚಲೋಹದ 3 ಗಣಪತಿ ವಿಗ್ರಹ, 155 ಗ್ರಾಂ ತೂಕದ ಬೆಳ್ಳಿ ಕವಚ ಹೊಂದಿರುವ 3 ಗಣಪತಿ ವಿಗ್ರಹ, 500 ಗ್ರಾಂ ತೂಕದ ಬೆಳ್ಳಿಯ ಶಡಗೋಪ, 2 ಕೆ.ಜಿ.ತೂಕದ ಬೆಳ್ಳಿಯ ಪ್ರಭಾವಳಿ, 300 ಗ್ರಾಂ ತೂಕದ ಬೆಳ್ಳಿ ಕವಚ ಸಹಿತ ಬಲಮುರಿ ಶಂಖ, 750 ಗ್ರಾಂ ತೂಕದ 3 ಬೆಳ್ಳಿ ಗ್ಲಾಸು ಮತ್ತು 2 ಬೆಳ್ಳಿ ಚಮಚ, 300 ಗ್ರಾಂ ತೂಕದ ಬೆಳ್ಳಿ ಅರ್ಘ್ಯ ಪಾತ್ರೆ ಕಳವಾಗಿರು ವುದಾಗಿ ತಿಳಿದು ಬಂದಿದೆ. ಕಳವಾದ ಸೊತ್ತುಗಳ ಮೌಲ್ಯ 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಪುತ್ತೂರು ಡಿವೈಎಸ್ಪಿ ಶ್ರೀನಿವಾಸ್, ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ, ಎಸ್‌ಐ ಅಜೇಯ್‌ಕುಮಾರ್ ಡಿ.ಎನ್, ಅಪರಾಧ ವಿಭಾಗದ ಎಸ್‌ಐ ರುಕ್ಮಯ, ಎ.ಎಸ್.ಐ ಲೋಕನಾಥ್ ಮತ್ತು ಸಿಬ್ಬಂದಿ ದೇವಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳವನ್ನು ಕರೆಸಲಾಗಿದೆ. ಕಳವು ಘಟನೆಯ ಕುರಿತು ಲಕ್ಷ್ಮೀ ವೆಂಕಟ್ರಮಣ ಮಠದ ಆಡಳಿತ ಮಂಡಳಿಯ ಅಧ್ಯಕ್ಷ ಉಮಾಶಂಕರ್ ಎದುರ್ಕಳ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.







