ವಿನಾಯಕ್ ನಾಪತ್ತೆಯಲ್ಲಿ ಮದನ್ ಪಾತ್ರ: ಹೆತ್ತವರ ಆರೋಪ
ಮಂಗಳೂರು, ನ. 9: ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯೋರ್ವ ಅ.8ರಿಂದ ನಾಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ಮಾಜಿ ಪಿಎಸ್ಸೈ ಮದನ್ ಅವರ ಪಾತ್ರವಿದೆ ಎಂದು ಆರೋಪಿಸಿ ಹೆತ್ತವರು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶಕ್ತಿನಗರ ನಿವಾಸಿ ಶಿವಕುಮಾರ್ ಅವರ ಪುತ್ರ ವಿನಾಯಕ (19) ನಾಪತ್ತೆಯಾದ ವಿದ್ಯಾರ್ಥಿ. ನಗರದ ಬಿಜೈ ದೀಪಾಂಜಲಿ ಅಪಾರ್ಟ್‌ಮೆಂಟ್‌ನಿಂದ ಅಂದು ಸಂಜೆ 5:30ಕ್ಕೆ ಹೊರ ಹೋದ ಈತ ಹಿಂದಿರುಗದೆ ನಾಪತ್ತೆಯಾಗಿದ್ದನು. ಈತ ಇಂಜಿನಿಯರಿಂಗ್ ದ್ವಿತೀಯ ವರ್ಷದಲ್ಲಿ ಕಾಲೇಜು ತೊರೆದು ಕಳೆದ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಮದನ್ ಜತೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ. ಚುನಾವಣೆ ಕಳೆದ ಬಳಿಕವೂ ಅವರ ಮನೆಯಲ್ಲೇ ಉಳಿದು ಕೊಂಡಿದ್ದ ಎಂದು ಆತನ ಪೋಷಕರು ದೂರಿದ್ದಾರೆ.
ಮಗ ವಿನಾಯಕನನ್ನು ತಮ್ಮ ಮನೆಗೆ ಕಳುಹಿಸಿ ಕೊಡುವಂತೆ ಹಲವು ಬಾರಿ ಕೇಳಿಕೊಂಡಿದ್ದೆವು. ಮಗ ಒಳ್ಳೆಯ ಕೆಲಸ ಪಡೆದು ಹಿಂತಿರುಗಲಿದ್ದಾನೆ ಎಂದು ಮದನ್ ನಮ್ಮ ಮನ ಒಲಿಸಿ ಅವರೊಂದಿಗೆ ಇರಿಸಿಕೊಂಡಿದ್ದರು. ನ. 8ರಿಂದ ಪುತ್ರ ಮೊಬೈಲ್ ಸಂಪರ್ಕ ಕಡಿದುಕೊಂಡಿದ್ದಾನೆ. ಅ.15ರಂದು ಮದನ್ ಜತೆ ಮಗನ ಬಗ್ಗೆ ವಿಚಾರಿಸಿದಾಗ ಆತ ಮನೆಯಿಂದ ಹೊರಟು ಹೋಗಿದ್ದಾನೆ. ಆತನ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಆತ ಕಾಣೆಯಾಗಲು ಮದನ್ ಅವರೇ ಕಾರಣ ಎಂದು ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಉರ್ವಾ ಪೊಲೀಸರು ಆತನ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.







