ಅಕ್ರಮ ಮಟ್ಕಾ ದಂಧೆ: ಇಬ್ಬರ ಬಂಧನ
ಮಂಗಳೂರು, ನ.9: ಎನ್‌ಎಂಪಿಟಿ ಪರಿಸರದಲ್ಲಿ ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕುಳಾಯಿ ಮೂಡಬೆಟ್ಟು ನಿವಾಸಿ ಶ್ರೀರಾಮ ಮತ್ತು ಕೃಷ್ಣಾಪುರ ಕಾಟಿಪಳ್ಳ ನಿವಾಸಿ ಭೋಜ ಬಂಧಿತ ಆರೋಪಿಗಳು.
ಆರೋಪಿಗಳು ನ.8ರಂದು ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಎನ್‌ಎಂಪಿಟಿ ಮುಖ್ಯದ್ವಾರದ ಪರಿಸರದಲ್ಲಿ ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ ಮಟ್ಕಾ ಆಟಕ್ಕೆ ಬಳಸಿದ 16,890 ರೂ. ನಗದು, ಮಟ್ಕಾ ನಂಬರ್ ಬರೆದ ಚೀಟಿಗಳು, 4 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶಾಂತಾರಾಮ, ಪಿಎಸ್ಸೈಗಳಾದ ಶ್ಯಾಮ್ ಸುಂದರ್, ಕಬ್ಬಾಳ್‌ರಾಜ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
Next Story





