ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಾರಂಭ: ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್

ಶಿವಮೊಗ್ಗ, ನ. 9: ಜಿಲ್ಲಾ ಚುನಾವಣಾ ಶಾಖೆಯು ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯವನ್ನು ನಾಳೆಯಿಂದ ಆರಂಭಿಸಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ್ ಅವರು ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ನಾಳೆಯಿಂದ ಆರಂಭಗೊಳ್ಳಲಿರುವ ಈ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವು ಅಂತಿಮವಾಗಿ 2019ರ ಜನವರಿ 15ರಂದು ಪೂರ್ಣಗೊಂಡು ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದರು.
ಪರಿಷ್ಕರಣೆಯ ಅವಧಿ ನವೆಂಬರ್ 15ರಿಂದ 31ರವರೆಗೆ ನಡೆಯಲಿದ್ದು, ಜಿಲ್ಲಾ ಚುನಾವಣಾ ಶಾಖೆಯಿಂದ ನಿಯೋಜಿತ ಮತಗಟ್ಟೆ ಅಧಿಕಾರಿಗಳು ಮನೆ-ಮನೆ ಭೇಟಿ ನೀಡಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
ನವೆಂಬರ್ 10 ರಿಂದ ಡಿಸೆಂಬರ್ 20ರವರೆಗೆ ಮತದಾರರು ಪಟ್ಟಿಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಒದಗಿಸಲಾಗಿದೆ. ಇದಲ್ಲದೇ ಮತದಾರರು ಪ್ರಕಟಿತ ಮತದಾರರ ಪಟ್ಟಿಯನ್ನು ಅವಲೋಕಿಸಿ ತಮ್ಮ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇದೇ ಸಂದರ್ಭದಲ್ಲಿ ಪಟ್ಟಿಯಲ್ಲಿನ ತಿದ್ದುಪಡಿ, ವರ್ಗಾವಣೆ, ಹೊಸ ಸೇರ್ಪಡೆ, ಮರಣ ಹೊಂದಿದವರ ಹೆಸರುಗಳನ್ನು ಕೈಬಿಡಲು ಅವಕಾಶ ಕಲ್ಪಿಸಲಾಗಿದೆ.
ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಾಗಿರುವ ಕುಟುಂಬಗಳ ಸದಸ್ಯರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ತಪ್ಪಿದಲ್ಲಿ ನಿಯಮಾನುಸಾರ ನಿಗಧಿತ ಪ್ರದೇಶದಲ್ಲಿ ಇಲ್ಲದಿರುವುದನ್ನು ಖಚಿತಪಡಿಸಿದ ಅಧಿಕಾರಿಗಳು ಹೆಸರನ್ನು ರದ್ದುಪಡಿಸಲು ಶಿಫಾರಸ್ಸು ಮಾಡುವ ಸಂಭವಿರುವುದಾಗಿ ಅವರು ತಿಳಿಸಿದರು.
ಸಾರ್ವಜನಿಕ ಸಹಭಾಗಿತ್ವದ ದೃಷ್ಠಿಯಿಂದ ರಾಷ್ಟ್ರೀಯ ಪಕ್ಷಗಳ ಮುಖಂಡರು ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೆ ಪ್ರತಿನಿಧಿಗಳನ್ನು ನೇಮಿಸಿಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವ, ಮರಣಹೊಂದಿರುವ ಹಾಗೂ ಸೇರ್ಪಡೆಗೊಳಿಸುವ ಹೆಸರನ್ನು ಖಚಿತಪಡಿಸುವಂತೆ ಸೂಚಿಸಿದ ಅವರು, 2019ರ ಜನವರಿ 01ಕ್ಕೆ 18ವರ್ಷ ತುಂಬಲಿದ್ದು, ಅರ್ಹತಾ ದಿನಾಂಕ ಪೂರೈಸುವ ಸಾರ್ವಜನಿಕರು, ವಿದ್ಯಾರ್ಥಿಗಳು ಅಗತ್ಯ ಮಾಹಿತಿ ನೀಡಿ ಹೆಸರು ಸೇರ್ಪಡೆಗೊಳಿಸಿಕೊಳ್ಳುವಂತೆ ಅವರು ತಿಳಿಸಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಪರಿಷ್ಕರಣೆ ಕಾರ್ಯಗಳನ್ನು ವೀಕ್ಷಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರನ್ನು ನೇಮಿಸಲಾಗಿದೆ ಎಂದವರು ನುಡಿದರು.
ಇದಲ್ಲದೇ ಜಿಲ್ಲೆಗೆ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ನೋಂದಣಾಧಿಕಾರಿಗಳನ್ನು ನೇಮಿಸಲಾಗಿದೆ. ಶಿವಮೊಗ್ಗ ಉಪವಿಭಾಗಾಧಿಕಾರಿಗಳನ್ನು ಶಿಮೊಗ್ಗ, ಭದ್ರಾವತಿ ಹಾಗೂ ತೀರ್ಥಹಳ್ಳಿ ತಾಲೂಕುಗಳ ನೋಂದಣಾಧಿಕಾರಿಗಳಾಗಿ, ಮಹಾನಗರಪಾಲಿಕೆ ಆಯುಕ್ತರನ್ನು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ಸಾಗರದ ಉಪವಿಭಾಗಾಧಿಕಾರಿಗಳನ್ನು ಶಿಕಾರಿಪುರ, ಸೊರಬ, ಸಾಗರ ಮತ್ತು ಹೊಸನಗರ ತಾಲೂಕುಗಳ ನೋಂದಣಾಧಿಕಾರಿಗಳಾಗಿ ಹಾಗೂ ಆಯಾ ತಾಲೂಕಿ ತಹಶೀಲ್ದಾರರನ್ನು ಸಹಾಯಕ ನೋಂದಣಾಧಿಕಾರಿಗಳಾಗಿ ನೇಮಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ 7,10,026ಪುರುಷ ಹಾಗೂ 7,13,061 ಮಹಿಳೆಯರು ಸೇರಿದಂತೆ ಒಟ್ಟು 14,23,087ಮತದಾರರು ಇದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಒಟ್ಟು 1775 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದ ಅವರು, ನಗರ ಪ್ರದೇಶದಲ್ಲಿ 1400 ಮತದಾರರಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 1300ಮತದಾರರಿಗಿಂತ ಹೆಚ್ಚಿನ ಸಂಖ್ಯೆಯ ಮತದಾರರು ಮತಕೇಂದ್ರದಲ್ಲಿ ಇದ್ದಲ್ಲಿ ಅಂತಹ ಮತಗಟ್ಟೆಗಳನ್ನು ಸಂಖ್ಯೆಯ ಆಧಾರದ ಮೇಲೆ ವಿಭಜಿಸಲಾಗುವುದು ಎಂದವರು ತಿಳಿಸಿದರು. ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರು ಉಪಸ್ಥಿತರಿದ್ದರು.







