ಪಿಎನ್ಬಿ ಬ್ಯಾಂಕ್ಗೆ ಬ್ರಿಟನ್ನಲ್ಲೂ ವಂಚನೆ
ಲಂಡನ್, ನ. 10: ಭಾರತದಲ್ಲಿ ಪಿಎನ್ಬಿ ಹಗರಣ ದೊಡ್ಡ ಸುದ್ದಿ ಮಾಡಿರುವ ನಡುವೆಯೇ ಬ್ರಿಟನ್ನಲ್ಲೂ ಪಿಎನ್ಬಿ ಬ್ಯಾಂಕ್ಗೆ ಸುಮಾರು 271 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ಬಗ್ಗೆ ಐದು ಮಂದಿ ಭಾರತೀಯರು, ಒಬ್ಬ ಅಮೆರಿಕನ್ ಹಾಗೂ ಬ್ರಿಟನ್ನ ಮೂರು ಕಂಪನಿಗಳ ವಿರುದ್ಧ ಬ್ರಿಟನ್ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದು, ಮೋಸದಿಂದ ಬ್ಯಾಂಕ್ ಅಧಿಕಾರಿಗಳನ್ನು ದಿಕ್ಕು ತಪ್ಪಿಸಿ ಕೋಟ್ಯಂತರ ಡಾಲರ್ ಸಾಲ ಪಡೆದಿದ್ದಾರೆ. ಇದೀಗ ಬ್ಯಾಂಕಿಗೆ ಸುಮಾರು 37 ದಶಲಕ್ಷ ಡಾಲರ್ ಅಂದರೆ 271 ಕೋಟಿ ರೂಪಾಯಿ ಬಾಕಿ ಬರಬೇಕಿದೆ ಎಂದು ಬ್ಯಾಂಕ್ ಹೇಳಿದೆ.
ಬ್ರಿಟನ್ನಲ್ಲಿ ಏಳು ಶಾಖೆಗಳನ್ನು ಹೊಂದಿರುವ ಪಿಎನ್ಬಿ (ಇಂಟರ್ನ್ಯಾಷನಲ್) ಲಿಮಿಟೆಡ್ ಆರು ಮಂದಿ ಹಾಗೂ ಮೂರು ಕಂಪನಿಗಳ ವಿರುದ್ಧ, "ಮೋಸದಿಂದ ಹಲವು ಸಾಲಗಳನ್ನು ಪಡೆಯಲು ತಪ್ಪು ಮಾಹಿತಿ ನೀಡಿದ್ದು" ಮತ್ತು "ಒಪ್ಪಂದ ಉಲ್ಲಂಘನೆ" ಆರೋಪ ಹೊರಿಸಲಾಗಿದೆ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಲ್ಯೂಬ್ರಿಕೆಂಟ್ ಆಯಿಲ್ ಶುದ್ಧೀಕರಣ ಘಟಕ ಸ್ಥಾಪನೆ ಮತ್ತು ಗಾಳಿ ವಿದ್ಯುತ್ ಯೋಜನೆಗಳ ಅಭಿವೃದ್ಧಿ ಹಾಗೂ ಮಾರಾಟಕ್ಕಾಗಿ ಈ ಸಾಲ ಪಡೆಯಲಾಗಿತ್ತು ಎಂದು ಬ್ಯಾಂಕ್ ದೂರು ನೀಡಿದೆ.
ಸಾಲ ಪಡೆಯುವ ಸಲುವಾಗಿ ಯೋಜನೆಯ ಸದ್ಯದ ಸ್ಥಿತಿ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ ಹಾಗೂ ಅತಿರಂಜಿತ ಅಂದಾಜು ಮತ್ತು ಬ್ಯಾಲೆನ್ಸ್ಶೀಟ್ ಸಲ್ಲಿಸಲಾಗಿದೆ. ಹೀಗೆ ಪಡೆದ ಹಣವನ್ನು ಕಂಪನಿಯ ನಿರ್ದೇಶಕರು ಮತ್ತು ಸಾಲಗಾರರ ಜಾಮೀನುದಾರರು ದುರ್ಬಳಕೆ ಮಾಡಿಕೊಂಡಿದ್ದು, ಇದು ವಂಚನಾ ಜಾಲ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಬ್ಯಾಂಕ್ ವಿವರಿಸಿದೆ.
ಲಂಡನ್ ಶಾಖೆಯಿಂದ 2011- 2014ರ ಅವಧಿಯಲ್ಲಿ ನಾಲ್ಕು ಕಂಪನಿಗಳಿಗೆ ಸಾಲ ನೀಡಲಾಗಿದ್ದು, ಇವೆಲ್ಲವೂ ಅಮೆರಿಕದಲ್ಲಿ ನೋಂದಣಿಯಾಗಿರುವ ಕಂಪನಿಗಳು. ಇವು ನವೀಕರಿಸಬಹುದಾದ ಇಂಧನ ಮೂಲದ ವಿದ್ಯುತ್ ಕಂಪನಿಗಳಾಗಿದ್ದು, ಸೌತ್ ಈಸ್ಟರ್ನ್ ಪೆಟ್ರೋಲಿಯಂ ಎಲ್ಎಲ್ಸಿ, ಪೆಸ್ಕೊ ಬೀಮ್ ಯುಎಸ್ಎ, ತ್ರಿಶ್ ವಿಂಡ್ ಮತ್ತು ತ್ರಿಶ್ ರಿಸೋರ್ಸಸ್ಗೆ ಸಾಲ ನೀಡಲಾಗಿತ್ತು. ಈ ಪೈಕಿ ಎಸ್ಇಪಿಎಲ್ ಈಗಾಗಲೇ 17 ದಶಲಕ್ಷ ಡಾಲರ್ ಸುಸ್ತಿಬಾಕಿ ಹೊಂದಿದೆ. ಆದರೆ ಕಂಪನಿ ದಿವಾಳಿಯಂಚು ತಲುಪಿದೆ ಎಂದು ವಿವರಿಸಲಾಗಿದೆ.