ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಆಲೋಚನೆ ಅಗತ್ಯ: ಡಾ.ಕರಿಸಿದ್ದಪ್ಪ
‘ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್’ ಸ್ಪರ್ಧೆ; ವಿಜ್ಞಾನ ಮಾದರಿ ಪ್ರದರ್ಶನ

ಮಂಗಳೂರು, ನ.10: ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಆಲೋಚನೆ ಅತ್ಯಗತ್ಯವಾಗಿದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಗೌರವಾನ್ವಿತ ಉಪಕುಲಪತಿ ಡಾ.ಕರಿಸಿದ್ದಪ್ಪ ತಿಳಿಸಿದರು.
ನಗರದ ಹೊರವಲಯ ಅಡ್ಯಾರ್‌ನಲ್ಲಿನ ಸಹ್ಯಾದ್ರಿ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ (ಎಸ್‌ಎಸ್‌ಟಿಎಚ್-18) ಸ್ಪರ್ಧೆ ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನದ ಕಡೆಗೆ ಯುವ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಎಸ್‌ಎಸ್‌ಟಿಎಚ್-18 ಸ್ಪರ್ಧೆಯನ್ನು ಸಹ್ಯಾದ್ರಿ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್ ಮೆಂಟ್ ಕಾಲೇಜು ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ವಿಜ್ಞಾನದ ಮಾದರಿಗಳನ್ನು ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಈ ಕಾರ್ಯಕ್ರಮವು ಹೊಸ ಕಲನೆಗಳ ಪೀಳಿಗೆಗೆ ಕೊಡುಗೆ ನೀಡುತ್ತದೆ. ಜೊತೆಗೆ ವೈಯಕ್ತಿಕ ಸಂಪರ್ಕಗಳನ್ನು ಪ್ರೋತ್ಸಾಹಿಸುತ್ತದೆ ಎಂದರು.
ಪ್ರಾಥಮಿಕವಾಗಿ ಪಿಯುಸಿ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 30 ವಲಯಗಳಲ್ಲಿ 70 ಕಾಲೇಜುಗಳ ತಂಡ ಭಾಗವಹಿಸಿದ್ದವು. ಗ್ರಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ 1,300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನವದಿಲ್ಲಿಯ ಐಇಇಟಿ ಅಧ್ಯಕ್ಷ ಡಾ.ಕೆ.ಕೆ.ಟಿ.ವಿ. ರೆಡ್ಡಿ, ಸಂಯುಕ್ತ ರಾಷ್ಟ್ರದ ನೀತಿಗಳು ಹಾಗೂ ಎಸ್‌ಡಿಜಿಯ ಸಿದ್ಧಾರ್ಥ ರಾಜಹನ್ಸ್, ಬೆಂಗಳೂರಿನ ಐಐಎಂನ ಮಾಜಿ ಎನ್‌ಎಸ್‌ಆರ್‌ಸಿಎಲ್ ಹಾಗೂ ಸ್ಟಾರ್ಟಪ್ರೆನಿಯರ್ ಸಂಸ್ಥಾಪಕ ಆಕರ್ಶ್ ನಾಯ್ಡು, ಬೆಂಗಳೂರಿನ ಸೊಲಿಡಕ್ಸ್ ಹೈಟೆಚ್ ಪ್ರೊಡಕ್ಟ್ಸ್‌ನ ಪ್ರಧಾನ ವ್ಯವಸ್ಥಾಪಕ ಸಿ.ನಾಗರಾಜ್, ಮೇಕ್ ರೂಮ್ ಇಂಡಿಯಾದ ಸಹ-ಸಂಸ್ಥಾಪಕ ಪ್ರಣವ್ ಹೆಬ್ಬಾರ್, ಸಹ್ಯಾದ್ರಿ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಶ್ರೀನಿವಾಸ್ ರಾವ್ ಕುಂಟೆ, ಭಂಡಾರಿ ಫೌಂಡೇಶನ್‌ನ ಮಂಜುನಾಥ ಭಂಡಾರಿ, ಯೋಜನಾ ಸಂಯೋಜಕ ಜಾನ್ಸನ್ ಟೆಲ್ಲಿಸ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅನುಜ್ಞಾ ಹಾಗೂ ಸ್ನೇಹಾ ಪ್ರಾರ್ಥಿಸಿದರು.







