ಪತ್ನಿಯ ನೆನಪಿಗೆ ಮಿನಿ ತಾಜ್ ಮಹಲ್ ಕಟ್ಟಿಸಿದ್ದ ವ್ಯಕ್ತಿ ಅಪಘಾತದಲ್ಲಿ ಮೃತ್ಯು
ದೇಶಾದ್ಯಂತ ಸುದ್ದಿಯಾಗಿದ್ದ ಫೈಝಲ್ ಹಸನ್

ಗಾಝಿಯಾಬಾದ್, ನ. 10: ಮೃತಪಟ್ಟ ತನ್ನ ಮಡದಿಯ ಸ್ಮರಣಾರ್ಥ ಮಿನಿ ತಾಜ್‌ಮಹಲ್ ನಿರ್ಮಿಸಿ ಜನಪ್ರಿಯರಾಗಿದ್ದ ಪಶ್ಚಿಮ ಉತ್ತರಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಕಸೇರ್ ಕಲನ್‌ನ 83ರ ಹರೆಯದ ನಿವೃತ್ತ ಪೋಸ್ಟ್ ಮಾಸ್ಟರ್ ಫೈಝಲ್ ಹಸನ್ ಖಾದ್ರಿ ಅವರು ಬುಲಂದ್‌ಶಹರ್‌ನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟಿದ್ದಾರೆ.
ಕಸೇರ್ ಕಲನ್ ಗ್ರಾಮದಲ್ಲಿ ಮನೆಯ ಹೊರಗಡೆ ಅಪರಿಚಿತ ವಾಹನ ಢಿಕ್ಕಿ ಆದ ಬಳಿಕ ಖಾದ್ರಿ ಅವರನ್ನು ಅಲಿಗಢದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆ ಉಸಿರೆಳೆದರು ಎಂದು ಖಾದ್ರಿ ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಗುರುವಾರ ರಾತ್ರಿ 10.30ಕ್ಕೆ ಅವರು ಮನೆಯ ಹೊರಗಡೆ ವಾಕಿಂಗ್ ಮಾಡುತ್ತಿದ್ದರು. ಈ ಸಂದರ್ಭ ಅಪರಿಚಿತ ವಾಹನವೊಂದು ಅವರಿಗೆ ಢಿಕ್ಕಿ ಹೊಡೆಯಿತು. ಗಾಯಗೊಂಡು ಅವರು ಕೆಳಗೆ ಬಿದ್ದ ಬಗ್ಗೆ ತನಗೆ ಮಾಹಿತಿ ತಿಳಿಯಿತು. ತಾನು ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿದೆ. ಆದರೆ, ಅವರು ಶುಕ್ರವಾರ 11 ಗಂಟೆ ಹೊತ್ತಿಗೆ ಮೃತಪಟ್ಟರು ಎಂದು ಖಾದ್ರಿ ಅವರ ಸೋದರಳಿಯ ಮುಹಮ್ಮದ್ ಅಸ್ಲಾಂ ಹೇಳಿದ್ದಾರೆ.
ತನ್ನ ಮಡದಿಯ ಸ್ಮರಣಾರ್ಥ ಮನೆಯ ಸಮೀಪ ಮಿನಿ ತಾಜ್ ಮಹಲ್ ನಿರ್ಮಿಸಿ ಹಾಗೂ ಸರಕಾರಿ ಹೆಣ್ಣು ಮಕ್ಕಳ ಶಾಲೆಗೆ ಜಮೀನು ಬಿಟ್ಟುಕೊಟ್ಟು ಖಾದ್ರಿ ಜನಪ್ರಿಯರಾಗಿದ್ದರು. ಖಾದ್ರಿ ಅವರ ಪತ್ನಿ ತಾಜಮುಲ್ಲಿ ಬೇಗಂ ಗಂಟಲು ಕ್ಯಾನ್ಸರ್‌ನಿಂದ 2011 ಡಿಸೆಂಬರ್‌ನಲ್ಲಿ ಮೃತಪಟ್ಟಿದ್ದರು. ಅವರಿಬ್ಬರು 1953ರಲ್ಲಿ ವಿವಾಹವಾಗಿದ್ದರು. ಅವರಿಗೆ ಮಕ್ಕಳು ಇರಲಿಲ್ಲ.





