ಎಂಸಿಸಿ ಬ್ಯಾಂಕಿನಿಂದ ವರ್ಷದೊಳಗೆ 5 ಎಟಿಎಂ ಆರಂಭ
ಉಡುಪಿ, ನ.10: ಮಂಗಳೂರಿನ ಕೆಥೊಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಬ್ಯಾಂಕ್(ಎಂಸಿಸಿ) ಕಳೆದ ಆರ್ಥಿಕ ವರ್ಷದಲ್ಲಿ ಹಲವು ಪ್ರತಿಕೂಲಗಳ ಹೊರತಾ ಗಿಯೂ 3.5ಕೋಟಿ ರೂ. ಲಾಭವನ್ನು ಗಳಿಸಿದ್ದು, ಶೇ.10ರಷ್ಟು ಡಿವೆಡೆಂಟ್‌ನ್ನು ವಿತರಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಆಡಳಿತ ಮಂಡಳಿ ಅಧಿಕಾರ ಸ್ವೀಕರಿಸಿದ ಕೇವಲ ಎರಡು ತಿಂಗಳಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದರು.
ಡಿಸೆಂಬರ್ ತಿಂಗಳೊಳಗೆ ಬಿ.ಸಿ.ರೋಡ್, ಬಜಪೆ, ಕಂಕನಾಡಿ ಶಾಖೆಗಳನ್ನು ಸಂಪೂರ್ಣ ಹವಾನಿಯಂತ್ರಿತಗೊಳಿಸಿ ಅಲ್ಲಿ ಎಟಿಎಂಗಳನ್ನು ತೆರೆಯ ಲಾಗುವುದು ಎಂದ ಅವರು ಬ್ಯಾಂಕಿನ ಆಯ್ದ ಶಾಖೆಗಳಲ್ಲಿ ಇ-ಸ್ಟಾಂಪಿಂಗ್, ಪಾನ್ ಕಾರ್ಡ್ ಹಾಗೂ ಹಿರಿಯ ನಾಗರಿಕರ ಕಾರ್ಡ್ ಸೇವೆಗಳನ್ನು ಆರಂಭಿಸಲಾಗುವುದು ಎಂದರು.
ಇದರೊಂದಿಗೆ ಬಹುನಿರೀಕ್ಷೆಯ ಎನ್‌ಆರ್‌ಐ ಸೆಲ್‌ನ ಉದ್ಘಾಟನೆ ಹಾಗೂ ಎನ್‌ಆರ್‌ಐ ಸಮಾವೇಶ ಡಿ.10ರಂದು ನಡೆಯಲಿದೆ ಎಂದು ಅನಿಲ್ ಲೋಬೊ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜ್ಯೂಡ್ ಡಿಸಿಲ್ವಾ, ನಿರ್ದೇಶಕರಾದ ಎಲ್‌ರೊಯ್ ಕಿರಣ್ ಕ್ರಾಸ್ಟೊ, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಫ್ಲಾವಿಯಾ ಡಿಸೋಜಾ, ಜೆ.ಪಿ ರೊಡ್ರಿಗಸ್, ಡೇವಿಡ್ ಡಿಸೋಜಾ, ಹೆರಾಲ್ಡ್ ಮೊಂತೆರೋ, ಮಾರ್ಸೆಲ್ ಡಿಸೋಜಾ, ಬ್ಯಾಂಕಿನ ಮಹಾ ಪ್ರಬಂಧಕ ಸುನೀಲ್ ಮಿನೇಜಸ್ ಉಪಸ್ಥಿತರಿದ್ದರು.







