ಪುತ್ತೂರು: ಶಾಲಾ ಬಸ್ಸಿನಿಂದ ಎಸೆಯಲ್ಪಟ್ಟು ವಿದ್ಯಾರ್ಥಿ ಮೃತ್ಯು

ಪುತ್ತೂರು, ನ. 10: ಶಾಲಾ ಬಸ್ಸಿನಿಂದ ಎಸೆಯಲ್ಪಟ್ಟು ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲ ಸಮೀಪದ ಪಟ್ಲಡ್ಕ ಎಂಬಲ್ಲಿ ಈಶ್ವರಮಂಗಲ-ಪಟ್ಟೆ ಸಂಪರ್ಕ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ವಿವೇಕಾನಂದ ವಿದ್ಯಾ ಸಂಸ್ಥೆ ಪ್ರಾಯೋಜಿತ ಈಶ್ವರಮಂಗಲದ ಗಜಾನನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ, ಬಡಗನ್ನೂರು ಗ್ರಾಮದ ಅಣಿಲೆ ನಿವಾಸಿ ಪದ್ಮನಾಭ ಆಳ್ವ ಎಂಬವರ ಪುತ್ರ ಗಗನ್ ಆಳ್ವ (15) ಮೃತ ವಿದ್ಯಾರ್ಥಿ.
ಗಜಾನನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದ ಗಗನ್ ಆಳ್ವ ದಿನನಿತ್ಯ ಶಾಲಾ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು, ಶನಿವಾರ ಮಧ್ಯಾಹ್ನ ಶಾಲೆ ಬಿಟ್ಟು ಮನೆಗೆ ಶಾಲಾ ಬಸ್ಸಿನಲ್ಲಿಯೇ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಈಶ್ವರಮಂಗಲದಿಂದ ಪುಳಿತ್ತಡಿ-ಪಟ್ಲಡ್ಕ,ಅಂಬಟೆಮೂಲೆಯಾಗಿ ಪಟ್ಟೆ ಕಡೆಗೆ ತೆರಳುತ್ತಿದ್ದ ಶಾಲಾ ಬಸ್ಸಿನಲ್ಲಿ ಬಾಗಿಲ ಬಳಿ ನಿಂತುಕೊಂಡು ಪ್ರಯಾಣಿಸುತ್ತಿದ್ದ ಗಗನ್ ಪಟ್ಲಡ್ಕ ತಿರುವು ರಸ್ತೆಯ ಬಳಿ ಏಕಾಏಕಿಯಾಗಿ ಬಸ್ಸಿನ ಬಾಗಿಲು ತೆರೆದುಕೊಂಡ ಪರಿಣಾಮವಾಗಿ ರಸ್ತೆಗೆ ಎಸೆಯಲ್ಪಟ್ಟ ಎಂದು ಹೇಳಲಾಗಿದೆ.
ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದ ಬಾಲಕನನ್ನು ತಕ್ಷಣ ಈಶ್ವರಮಂಗಲದ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯುತ್ತಿದ್ದ ವೇಳೆ ಆತ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ದೂರಲಾಗಿದೆ.
ಮೃತ ಬಾಲಕ ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾನೆ. ಘಟನೆಗೆ ಸಂಬಂಧಿಸಿ ಮೃತ ವಿದ್ಯಾರ್ಥಿಯ ತಂದೆ ಪದ್ಮನಾಭ ಆಳ್ವ ನೀಡಿದ ದೂರಿನಂತೆ ಸಂಪ್ಯ ಠಾಣಾ ಪೊಲೀಸರು ಕೇಸು ದಾಖಲಾಗಿದೆ.







