ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಕಾರ್ಯಕರ್ತರು ಸಜ್ಜಾಗಲು ವೀರಪ್ಪ ಮೊಯ್ಲಿ ಕರೆ

ಬೆಂಗಳೂರು, ಅ.10: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಜಯಗಳಿಸಲು ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಸಂಸದ ಎಂ.ವೀರಪ್ಪಮೊಯ್ಲಿ ಆಶಿಸಿದ್ದಾರೆ.
ಶನಿವಾರ ಯಲಹಂಕ ಉಪನಗರದಲ್ಲಿ ಸಂಸದರ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಇದು ಸಂಸದರ ಕಚೇರಿ ಮಾತ್ರವಲ್ಲ, ಕಾಂಗ್ರೆಸ್ ಕಾರ್ಯಕರ್ತರ ಕಚೇರಿಯು ಆಗಿದೆ. ಪಕ್ಷ ಸಂಘಟನೆ, ವಿವಿಧ ಘಟಕಗಳ ಸಭೆಗೆ ಈ ಕಚೇರಿ ಬಳಸಿಕೊಳ್ಳಬಹುದು. ಕ್ಷೇತ್ರದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಯಲಹಂಕ ದೊಡ್ಡ ವಿಧಾನಸಭಾ ಕ್ಷೇತ್ರವಾಗಿದೆ. ಇಲ್ಲಿ ಬಿಜೆಪಿ ಬಲ ಹೆಚ್ಚು ಇದ್ದು ಕಾಂಗ್ರೆಸ್ ಶಕ್ತಿ ಕುಂದಿದ್ದು, ಅದನ್ನು ಬಲಪಡಿಸಲು ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಬೇಕು ಎಂದು ಅವರು ಸಲಹೆ ನೀಡಿದರು.
ಯಲಹಂಕದಲ್ಲಿ 4 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಅದರಲ್ಲಿ ಎರಡೂವರೆ ಲಕ್ಷ ಮತಗಳು ಕಾಂಗ್ರೆಸ್‌ಗೆ ಬರುವಂತೆ ಮಾಡುವ ಸವಾಲನ್ನು ಕಾರ್ಯಕರ್ತರು ಸ್ವೀಕರಿಸಿ ಪಕ್ಷ ಸಂಘಟಿಸಬೇಕು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಘಟನೆ ಬಲಹೀನವಾದ್ದರಿಂದ ಕ್ಷೇತ್ರ ಬಿಜೆಪಿ ಪಾಲಾಯಿತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜಮಖಂಡಿ ವಿಧಾನಸಭಾ ಚುನಾವಣೆಯಲ್ಲಿ ಸಿದ್ದು ನ್ಯಾಮಗೌಡ ಎರಡು ಸಾವಿರ ಮತಗಳಿಂದ ಗೆದ್ದಿದ್ದರು. ಉಪಚುನಾವಣೆಯಲ್ಲಿ ಆನಂದ್ ನ್ಯಾಮಗೌಡ 36 ಸಾವಿರಕ್ಕೂ ಹೆಚ್ಚು ಮತದಿಂದ ಗೆದ್ದಿರುವುದು ನಮ್ಮ ಪಕ್ಷದ ಸಂಘಟನೆಯ ಶಕ್ತಿ ತೋರಿಸುತ್ತದೆ. ದೇಶದಲ್ಲಿ ಕಾಂಗ್ರೆಸ್ ಬಗ್ಗೆ ಒಲವು ಹೆಚ್ಚಾಗಿದೆ. ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲಿ ಗೆಲ್ಲುವ ವಾತಾವರಣವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಯುವ ಮುಖಂಡ ಹರ್ಷ ಮೊಯ್ಲಿ ಮಾತನಾಡಿ, ಯಲಹಂಕ ದೊಡ್ಡ ಕ್ಷೇತ್ರವಾದ್ದರಿಂದ ಜನರ, ಕಾರ್ಯಕರ್ತರ ಸಮಸ್ಯೆಗಳು ಹೆಚ್ಚು ಇರುತ್ತದೆ. ಅದಕ್ಕಾಗಿ ಯಲಹಂಕ ಉಪ ನಗರದಲ್ಲಿ ಸಂಸದರ ಎರಡನೇ ಕಚೇರಿ ತೆರೆಯಲಾಗಿದೆ. ಇದರ ಸದುಪಯೋಗವನ್ನು ಪಕ್ಷದ ಪದಾಧಿಕಾರಿಗಳು ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯಲಹಂಕ ಕ್ಷೇತ್ರ ಕಾಂಗ್ರೆಸ್ ಮುಖಂಡ ಎಂ.ಎನ್.ಗೋಪಾಲಕೃಷ್ಣ, ಜಿ.ಪಂ. ಸದಸ್ಯರಾದ ಚೊಕ್ಕನಹಳ್ಳಿ ವೆಂಕಟೇಶ್, ಲಾವಣ್ಯ ನರಸಿಂಹಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಜಯರಾಮಯ್ಯ, ಕೆಪಿಸಿಸಿ ಸದಸ್ಯ ಎಸ್.ಬಿ.ಭಾಷಾ ಸೇರಿ ಪ್ರಮುಖರು ಉಪಸ್ಥಿತರಿದ್ದರು.







