ರಾಜಕೀಯ ಕಾರಣಕ್ಕಾಗಿ ‘ಟಿಪ್ಪು ಜಯಂತಿ’ಗೆ ಬಿಜೆಪಿ ವಿರೋಧ ಸರಿಯಲ್ಲ: ಶಾಸಕ ಬಿ.ಎ.ಬಸವರಾಜ

ಬೆಂಗಳೂರು, ನ.10: ಬಿಜೆಪಿಯವರು ರಾಜಕೀಯ ಕಾರಣಗಳಿಗಾಗಿ ‘ಮೈಸೂರು ಹುಲಿ’ ಹಝ್ರತ್ ಟಿಪ್ಪುಸುಲ್ತಾನ್ ಜಯಂತಿಯನ್ನು ವಿರೋಧಿಸುವುದು ಸರಿಯಲ್ಲ. ರಾಜ್ಯ ಸರಕಾರವು ಮಹರ್ಷಿ ವಾಲ್ಮೀಕಿ, ಮಹಾವೀರ್, ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರನ್ನು ಸ್ಮರಿಸಲು ಅವರ ಜಯಂತಿಗಳನ್ನು ಆಚರಿಸುತ್ತಿದೆ ಎಂದು ಶಾಸಕ ಬಿ.ಎ.ಬಸವರಾಜ ತಿಳಿಸಿದರು.
ಶನಿವಾರ ನಗರದ ಕೆ.ಆರ್.ಪುರದಲ್ಲಿರುವ ಬೆಂಗಳೂರು ಪೂರ್ವ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ‘ಮೈಸೂರು ಹುಲಿ’ ಹಝ್ರತ್ ಟಿಪ್ಪುಸುಲ್ತಾನ್ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಅಭಿವೃದ್ಧಿ, ಸಾಮಾಜಿಕ ನ್ಯಾಯಕ್ಕಾಗಿ ಟಿಪ್ಪುಸುಲ್ತಾನ್ ನೀಡಿದ ಕೊಡುಗೆ ಅಪಾರ. ಅವರನ್ನು ಯಾವುದೋ ಒಂದು ಜಾತಿ, ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರ ಜಯಂತಿಯನ್ನು ವಿರೋಧಿಸುವುದು ಸರಿಯಲ್ಲ. ಅನಗತ್ಯವಾಗಿ ಯಾರೂ ಕೂಡ ಕೋಮುಭಾವನೆಗಳನ್ನು ಕೆರಳಿಸಿ, ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಬಾರದು ಎಂದು ಬಸವರಾಜ ಮನವಿ ಮಾಡಿದರು.
ಟಿಪ್ಪು ಸುಲ್ತಾನ್ ತಮ್ಮ ಆಡಳಿತಾವಧಿಯಲ್ಲಿ ರಾಜ್ಯದ ಅನೇಕ ದೇವಸ್ಥಾನಗಳಿಗೆ ಆರ್ಥಿಕ ನೆರವು ಒದಗಿಸಿದ್ದಾರೆ. ಶೃಂಗೇರಿಯ ಶಾರದಾಪೀಠದ ಮೇಲೆ ಮರಾಠ ಪೇಶ್ವೆಗಳು ದಾಳಿ ಮಾಡಿ ಮಠವನ್ನು ಲೂಟಿ ಮಾಡಿದ್ದರು. ಆಗ, ಮಠಾಧೀಶರ ನೆರವಿಗೆ ಬಂದು, ಮಠವನ್ನು ಮತ್ತೆ ಪುನರುಜ್ಜೀವನಗೊಳಿಸಲು ಟಿಪ್ಪುಸುಲ್ತಾನ್ ನೆರವು ನೀಡಿದ್ದನ್ನು ಯಾರೂ ಮರೆಯಬಾರದು ಎಂದು ಅವರು ಹೇಳಿದರು.
ಸರ್ವಧರ್ಮಗಳಿಗೆ ಸಮಾನ ಗೌರವ ನೀಡುತ್ತಿದ್ದ, ಬ್ರಿಟಿಷರ ವಿರುದ್ಧ ರಾಜಿ ಮಾಡಿಕೊಳ್ಳದೆ ತನ್ನ ಜೀವನದ ಕೊನೆಯ ಉಸಿರು ಇರುವವರೆಗೆ ಹೋರಾಟ ಮಾಡಿದ ಟಿಪ್ಪುಸುಲ್ತಾನ್‌ರನ್ನು ಮತಾಂಧ, ದೇಶದ್ರೋಹಿ ಎನ್ನುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಅವರನ್ನು ಟೀಕಿಸುವವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಬಸವರಾಜ ಸಲಹೆ ನೀಡಿದರು.
ದೀನ ದಲಿತರ ಕಲ್ಯಾಣಕ್ಕಾಗಿ ಟಿಪ್ಪುಸುಲ್ತಾನ್ ಶ್ರಮಿಸಿದರು. ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ಭೂ ಸುಧಾರಣೆಯನ್ನು ಜಾರಿಗೆ ತಂದು, ದಲಿತರಿಗೆ ಭೂಮಿಯ ಮಾಲಕತ್ವ ಒದಗಿಸಿದರು. ವಿದೇಶಗಳಿಂದ ವಿವಿಧ ಮಾದರಿಯ ತಳಿಗಳನ್ನು ತಂದು ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ಒದಗಿಸಿದ್ದರು. ರೇಷ್ಮೆಯನ್ನು ಪರಿಚಯಿಸಿ ರೈತರು ಆರ್ಥಿಕವಾಗಿ ಸದೃಢವಾಗಿರುವಂತೆ ನೋಡಿಕೊಂಡರು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ರಾಮಲಕ್ಷ್ಮಯ್ಯ, ಕಾಂಗ್ರೆಸ್ ಮುಖಂಡ ದೊಡ್ಡಯಲ್ಲಪ್ಪ, ಬಿಬಿಎಂಪಿ ಸದಸ್ಯರಾದ ಸುರೇಶ್, ಎಂ.ಎನ್.ಶ್ರೀಕಾಂತ್, ಜಯಪ್ರಕಾಶ್, ಪಿ.ಜೆ.ಅಂತೋಣಿಸ್ವಾಮಿ, ಮಾಜಿ ಸದಸ್ಯರಾದ ಎಚ್.ಎಸ್.ಅಮಾನುಲ್ಲಾ, ಮಂಜುಳಾದೇವಿ ಶ್ರೀನಿವಾಸ್ ಸೇರಿದಂತೆ ಉಪಸ್ಥಿತರಿದ್ದರು.







