ಮಣಿಪಾಲ: ಸಂಪರ್ಕ ರಸ್ತೆ ಅಗೆದ ಕಿಡಿಗೇಡಿಗಳು

ಉಡುಪಿ, ನ.10: ಮಣಿಪಾಲದ ಶೀಂಬ್ರವನ್ನು ಉಪ್ಪೂರು ಗ್ರಾಪಂ ವ್ಯಾಪ್ತಿಯ ಅಮ್ಮುಂಜೆಗೆ ಸಂಪರ್ಕಿಸುವ ಸ್ವರ್ಣಾ ನದಿಗೆ ಅಡ್ಡಲಾಗಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪರಾರಿ ಸೇತುವೆ ಕಾಮಗಾರಿ ಅತ್ಯಂತ ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು, ಭಾಗಶಃ ಪೂರ್ಣಗೊಂಡಿದೆ.
ಎರಡು ಕಡೆಗಳಲ್ಲೂ ಸೇತುವೆಯನ್ನು ಸಂಪರ್ಕಿಸಲು ರಚಿಸಿರುವ ಮಣ್ಣಿನ ರಸ್ತೆಯನ್ನು ಯಾರೊ ಕಿಡಿಗೇಡಿಗಳು ಅಗೆದಿದ್ದು ಇದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಸೇತುವೆ ಹಾಗೂ ಸಂಪರ್ಕ ರಸ್ತೆಗಳ ಕಾಮಗಾರಿ ನಡೆಯುತಿದ್ದರೂ, ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಅನುಕೂಲವಾಗಿತ್ತು. ಆದರೆ ಕಿಡಿಗೇಡಿಗಳ ಕೃತ್ಯದಿಂದ ಈಗ ಸಂಚಾರಕ್ಕೆ ಸಂಚಕಾರ ಬಂದಿದೆ.
ಅತ್ತ ಕಾಮಗಾರಿ ಪೂರ್ಣಗೊಳ್ಳದೇ, ಇತ್ತ ಪರಿಹಾರ ಹಣ ಬಿಡುಗಡೆ ಯಾಗದೆ ಕಾಮಗಾರಿಗೆ ತೊಂದರೆ ಉಂಟು ಮಾಡುವವರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರಾದ ಜಯಶೆಟ್ಟಿ ಬನ್ನಂಜೆ, ಗಣೇಶರಾಜ್ ಸರಳೇಬೆಟ್ಟು ಹಾಗು ಗಣೇಶ್ ಶೆಟ್ಟಿ ಕಿಳಿಂಜೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.





