ಸೌದಿ ಮಿತ್ರಕೂಟದ ವಿಮಾನಗಳಿಗೆ ಅಮೆರಿಕದ ಇಂಧನ ಪೂರೈಕೆ ಬಂದ್
ಪತ್ರಕರ್ತ ಖಶೋಗಿ ಹತ್ಯೆ ಪ್ರಕರಣ

ವಾಶಿಂಗ್ಟನ್, ನ. 10: ಯಮನ್ ನಲ್ಲಿ ಹೌದಿ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟದ ವಿಮಾನಗಳಿಗೆ ಇಂಧನ ಪೂರೈಕೆಯನ್ನು ಅಮೆರಿಕ ನಿಲ್ಲಿಸಲಿದೆ ಎಂದು ಅಮೆರಿಕ ಮತ್ತು ಸೌದಿ ಅರೇಬಿಯ ಶುಕ್ರವಾರ ತಿಳಿಸಿವೆ.
ಯಮನ್ ನಲ್ಲಿ ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟ ನಡೆಸುತ್ತಿರುವ ಕಾರ್ಯಾಚರಣೆಯ ವೇಳೆ, ಅದರ ಯುದ್ಧ ವಿಮಾನಗಳಿಗೆ ಆಕಾಶದಲ್ಲಿ ಇಂಧನ ತುಂಬಿಸುವ ಕಾರ್ಯವನ್ನು ನಿಲ್ಲಿಸುವಂತೆ ಕೋರಲು ಸೌದಿ ಅರೇಬಿಯ ನಿರ್ಧರಿಸಿದೆ ಎಂದು ವಾಶಿಂಗ್ಟನ್‌ನಲ್ಲಿರುವ ಸೌದಿ ಅರೇಬಿಯ ರಾಯಭಾರ ಕಚೇರಿಯ ಮೂಲಕ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಸೌದಿ ಅರೇಬಿಯ ತಿಳಿಸಿದೆ. ಯಾಕೆಂದರೆ, ಈ ಕೆಲಸವನ್ನು ಈಗ ನಾವೇ ಮಾಡಬಲ್ಲೆವು ಎಂದು ಸೌದಿ ಅರೇಬಿಯ ಹೇಳಿದೆ.
ಈ ನಿರ್ಧಾರವನ್ನು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಬೆಂಬಲಿಸಿದ್ದಾರೆ ಹಾಗೂ ಈ ಬಗ್ಗೆ ಅಮೆರಿಕದೊಂದಿಗೆ ಸಮಾಲೋಚಿಸಲಾಗಿದೆ ಎಂದಿದ್ದಾರೆ.
ಅಮೆರಿಕದಲ್ಲಿ ನೆಲೆಸಿದ್ದ ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಯ ಬಳಿಕ ಭುಗಿಲೆದ್ದ ಜಾಗತಿಕ ಆಕ್ರೋಶದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ.
ಖಶೋಗಿ ಹತ್ಯೆಗೆ ಸಂಸದರ ಪ್ರತೀಕಾರದ ಬೆದರಿಕೆ
ಸೌದಿ ನೇತೃತ್ವದ ಮಿತ್ರಕೂಟದ ವಿಮಾನಗಳಿಗೆ ಇಂಧನ ತುಂಬಿಸುವ ವಿಷಯದಲ್ಲಿ ಮುಂದಿನ ವಾರ ಅಮೆರಿಕದ ಸಂಸತ್ತು ಕಾಂಗ್ರೆಸ್‌ನಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಸಂಸದರು ಬೆದರಿಕೆ ಹಾಕಿರುವುದನ್ನು ಸ್ಮರಿಸಬಹುದಾಗಿದೆ.
ಡೆಮಾಕ್ರಟಿಗರು ಸೇರಿದಂತೆ ಸೌದಿ ಅರೇಬಿಯದ ಯಮನ್ ಕಾರ್ಯಾಚರಣೆಯ ಟೀಕಾಕಾರರು, ಈ ಕಾರ್ಯಾಚರಣೆಯಲ್ಲಿ ಅಮೆರಿಕ ತೊಡಗಿಸಿಕೊಂಡಿರುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಈ ವಾರದಲ್ಲಿ ನಡೆದ ಮಧ್ಯಂತರ ಚುನಾವಣೆಯ ಬಳಿಕ, ಡೆಮಾಕ್ರಟಿಗರು ಸಂಸತ್ತಿನ ಒಂದು ಭಾಗವಾಗಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಪ್ರಾಬಲ್ಯ ಹೊಂದಿರುವುದನ್ನು ಸ್ಮರಿಸಬಹುದಾಗಿದೆ.







